ಹೈದರಾಬಾದ್: ವಿದೇಶಗಳಲ್ಲಿ ಮಾತ್ರವಲ್ಲದೆ, ನಮ್ಮ ದೇಶದಲ್ಲೂ ಎಲೆಕ್ಟ್ರಾನಿಕ್ ವಾಹನಗಳ ಕಂಪನಿಗಳಿಂದ ಪೈಪೋಟಿ ಶುರುವಾಗಿದ್ದು, ರೈಡ್ ಬುಕ್ಕಿಂಗ್ ಕಂಪನಿ ಬೌನ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಎಲ್ಲರ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ನಿರ್ಧರಿಸಲಾಗಿದೆ. ಜೊತೆಗೆ ಹಲವು ವಿಶೇಷತೆಗಳನ್ನು ಈ ಸ್ಕೂಟರ್ ಹೊಂದಿದೆ.

ಬೌನ್ಸ್ ಹೊರತಂದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರೂ. 68,999 ರೂಪಾಯಿ ಎಂದು ಕಂಪನಿ ಘೋಷಿಸಿದೆ. ಸ್ಕೂಟರ್ ಜೊತೆಗೆ ಬ್ಯಾಟರಿ ಮತ್ತು ಚಾರ್ಜರ್ ಅನ್ನು ನೀಡಲಾಗುತ್ತದೆ. ಅಲ್ಲದೇ ಬ್ಯಾಟರಿ ಇಲ್ಲದೆ ಈ ಸ್ಕೂಟರ್ ತೆಗೆದುಕೊಂಡರೆ ಕೇವಲ 36 ಸಾವಿರಕ್ಕೆ ಮಾತ್ರ ಅಂತ ಕಂಪನಿ ತಿಳಿಸಿದೆ.

ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಿರುವ ಓಲಾ ಎಸ್1, ಬಜಾಜ್ ಚೇತಕ್ ಎಲೆಕ್ಟ್ರಿಕ್, ಟಿವಿಎಸ್ ಐಕ್ಯೂಬ್ ಹಾಗೂ ಅಥರ್ 450 ಎಕ್ಸ್‌ನಂತಹ ಕಂಪನಿಗಳಿಗೆ ಬೌನ್ಸ್ ಕಠಿಣ ಸವಾಲನ್ನು ಒಡ್ಡುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಟೆಸ್ಟ್ ರೈಡ್ ಆರಂಭವಾಗಲಿದ್ದು, 2022ರ ಮಾರ್ಚ್‌ನಿಂದ ಗ್ರಾಹಕರಿಗೆ ಸ್ಕೂಟರ್ ವಿತರಿಸಲಾಗುತ್ತದೆ.

ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು..
ಬೌನ್ಸ್ ಇನ್ಫಿನಿಟಿ ಸ್ಕೂಟರ್ ಜೊತೆಗೆ ಬ್ಯಾಟರಿಯನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದು ಬ್ಯಾಟರಿ ಇಲ್ಲದೆಯೇ ಸ್ಕೂಟರ್ ಖರೀದಿಸಲು ಗ್ರಾಹಕರಿಗೆ ಅನುಮತಿ ನೀಡಿದೆ. ಇದರೊಂದಿಗೆ, ಗ್ರಾಹಕರು ಬಯಸಿದಲ್ಲಿ ವೆಚ್ಚವನ್ನು ಕಡಿಮೆ ಮಾಡಬಹುದು.

ಒಮ್ಮೆ ಚಾರ್ಜ್ ಮಾಡಿದರೆ 85 ಕಿ.ಮೀ ಚಲಿಸುವ ಸಾಮರ್ಥ್ಯ
ಬೌನ್ಸ್ ಇನ್ಫಿನಿಟಿ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಸುಮಾರು 85 ಕಿ.ಮೀ ವರೆಗೆ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಡ್ರ್ಯಾಗ್ ಮೋಡ್..
ಈ ಸ್ಕೂಟರ್‌ನಲ್ಲಿರುವ ಮತ್ತೊಂದು ವೈಶಿಷ್ಟ್ಯವೆಂದರೆ ಡ್ರ್ಯಾಗ್ ಮೋಡ್. ಇದರಿಂದ ಸ್ಕೂಟರ್ ಪಂಕ್ಚರ್ ಆಗಿದ್ದರೆ ತಕ್ಷಣ ವಾಹನ ಸವಾರರನ್ನು ಎಚ್ಚರಿಸುತ್ತದೆ. ಡ್ರ್ಯಾಗ್ ಮೋಡ್ ಜೊತೆಗೆ, ಇದು ಪವರ್ ಮತ್ತು ಇಕೋ ಮೋಡ್‌ಗಳನ್ನು ಸಹ ಹೊಂದಿದೆ.

ಈ ಸ್ಕೂಟರ್ ಅನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು. ಇದಕ್ಕಾಗಿ ಬೌನ್ಸ್ ವಿಶೇಷವಾಗಿ ಆ್ಯಪ್‌ವೊಂದನ್ನು ಸಿದ್ಧಪಡಿಸಿದೆ. ಇದು ಸ್ಕೂಟರ್ ಬಗ್ಗೆ ಮಾಹಿತಿ ಮತ್ತು ಕೆಲವು ವೈಶಿಷ್ಟ್ಯಗಳನ್ನು ಫೋನ್‌ನಿಂದ ಕಾರ್ಯನಿರ್ವಹಿಸಲು ಅನುಮತಿಸುತ್ತದೆ.

ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ-ಆಧುನಿಕ ವಿನ್ಯಾಸದೊಂದಿಗೆ ಬರುತ್ತಿದೆ. ಆಧುನಿಕ ಅಂಶಗಳೊಂದಿಗೆ ರೆಟ್ರೊ ಶೈಲಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ಕೂಟರ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡೇಟೈಮ್ ರನ್ನಿಂಗ್ ಲೈಟ್‌ಗಳು, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಅಲಾಯ್ ವ್ಹೀಲ್‌ಗಳು, ಮುಂಭಾಗ ಹಾಗೂ ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು ಇರುತ್ತವೆ.

ಐದು ಬಣ್ಣಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ..
ಬೌನ್ಸ್ ಇನ್ಫಿನಿಟಿ ಇ1 ಎಂದು ಹೆಸರಿಸಲಾದ ಈ ಸ್ಕೂಟರ್ ಒಟ್ಟು ಐದು ಬಣ್ಣಗಳಲ್ಲಿ ಬರಲಿದೆ. ಸ್ಪಾರ್ಕಲ್ ಬ್ಲ್ಯಾಕ್, ಕಾಮೆಟ್ ಗ್ರೇ, ಸ್ಪೋರ್ಟಿ ರೆಡ್, ಪರ್ಲ್ ವೈಟ್ ಹಾಗೂ ಡೆಸಾಟ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್..
ಈ ಸ್ಕೂಟರ್ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್‌ನೊಂದಿಗೆ ಬರುತ್ತಿದ್ದು, ಡಿಜಿಟಲ್ ಮೀಟರ್‌ನಲ್ಲಿ ಸವಾರರು ಸ್ಕೂಟಿಯ ಬಗ್ಗೆ ಮಾಹಿತಿಯನ್ನು ವೀಕ್ಷಿಸಬಹುದು. ನಿರ್ದಿಷ್ಟವಾಗಿ ನೀವು ಇಗ್ನಿಷನ್ ಸ್ಥಿತಿ, ಸೈಡ್ ಸ್ಟ್ಯಾಂಡ್, ಸೂಚಕಗಳು, ಬ್ಯಾಟರಿ ಸ್ಥಿತಿ, ವೇಗ ಪ್ರದರ್ಶನ, ಸ್ಪೀಡೋಮೀಟರ್, ಬ್ಲೂಟೂತ್, ಹೈ ಬೀಮ್ ಸ್ಥಿತಿಯನ್ನು ನೋಡಬಹುದು.