ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ದೇಶದ ಮೊದಲ ಮೀಸಲಾದ ಎಕ್ಸ್‌ಪ್ರೆಸ್ ಕಾರ್ಗೋ ಟರ್ಮಿನಲ್ ಪರಿಚಯಿಸಲಿದ್ದು, ಇದು ಖಾಸಗಿ ವಿಮಾನ ನಿಲ್ದಾಣ ಆಯೋಜಕರಿಗೆ ವಾರ್ಷಿಕ ಶೇ 25ರಷ್ಟು ಹೆಚ್ಚಿನ ಸರಕು ನಿರ್ವಹಿಸಲು ನೆರವಾಗುತ್ತದೆ.
ವಹಿವಾಟಿನಿಂದ ಗ್ರಾಹಕ (ಬಿ2ಸಿ) ಮತ್ತು ವಹಿವಾಟಿನಿಂದ ವ್ಯವಹಾರದಂತಹ (ಬಿ2ಬಿ) ಕ್ಷೇತ್ರಗಳಿಗೆ ಎಕ್ಸ್‌ಪ್ರೆಸ್ ಸರಕು ಮಾರುಕಟ್ಟೆ ಮುಂದಿನ ದಶಕದಲ್ಲಿ ಬೆಳೆಯುವಂತಹ ಅದ್ಭುತ ಸಾಮರ್ಥ್ಯ ಹೊಂದಿದೆ. ಇದು ಬಹು ಸೇವಾ ಪೂರೈಕೆದಾರರು, ಸುಧಾರಿತ ಸಾರಿಗೆ ಸಮಯ ಮತ್ತು ಮೌಲ್ಯವರ್ಧಿತ ಸೇವೆಗಳೊಂದಿಗೆ ದೊಡ್ಡ ಅವಕಾಶ ತಂದೊಡ್ಡಲಿದೆ. ಅಂತಾರಾಷ್ಟ್ರೀಯ ಕೊರಿಯರ್‌ಗಳ ರಫ್ತು ಮತ್ತು ಆಮದುಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾದ ಹೊಸ ಸೌಲಭ್ಯವು ಈ ಬೇಡಿಕೆಯನ್ನು ಪೂರೈಸುತ್ತದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಶೇ 5.03ಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ!
ಬೆಂಗಳೂರು ವಿಮಾನ ನಿಲ್ದಾಣದ ಆಯೋಜಕರಾದ ಬಿಐಎಎಲ್ ಅಭಿವೃದ್ಧಿಪಡಿಸಿದ 2 ಲಕ್ಷ ಚದರ ಅಡಿಯನ್ನು ಎಕ್ಸ್‌ಪ್ರೆಸ್ ಕೊರಿಯರ್ ಸಂಸ್ಥೆಗಳಾದ ಡಿಎಚ್‌ಎಲ್ ಎಕ್ಸ್‌ಪ್ರೆಸ್ ಮತ್ತು ಫೆಡ್ಎಕ್ಸ್ ಎಕ್ಸ್‌ಪ್ರೆಸ್ ನಿರ್ಮಿಸಲಿದೆ ಎಂದಿದೆ.
ಎಕ್ಸ್‌ಪ್ರೆಸ್ ಇಂಡಸ್ಟ್ರಿ ಕೌನ್ಸಿಲ್ ಆಫ್ ಇಂಡಿಯಾ (ಇಐಸಿಐ) ಇತರ ಕೊರಿಯರ್ ಕಂಪನಿಗಳಿಗೆ ಸಾಮಾನ್ಯ ಬಳಕೆದಾರ ಎಕ್ಸ್‌ಪ್ರೆಸ್ ಟರ್ಮಿನಲ್ ನಿರ್ವಹಿಸಲಿದ್ದು, ಇದು ಬೆಂಗಳೂರಿನ ಈಗಾಗಲೇ ಸದೃಢವಾದ ಇ-ಕಾಮರ್ಸ್ ನೆಲೆಗೆ ಉತ್ತೇಜನ ನೀಡುತ್ತದೆ. ಟರ್ಮಿನಲ್ ಕಸ್ಟಮ್ ಕಚೇರಿಗಳಿಗೆ ಮೀಸಲು ಸ್ಥಳ ಹೊಂದಿರುತ್ತದೆ. ಭೂ ಮತ್ತು ವಾಯುಪ್ರದೇಶಗಳಿಗೆ ನೇರ ಪ್ರವೇಶವಿರುತ್ತದೆ.
ಬೆಂಗಳೂರು ವಿಮಾನ ನಿಲ್ದಾಣವು ಸರಕು ಕೇಂದ್ರವಾಗಲು ಉತ್ತಮ ಹಾದಿಯಲ್ಲಿದೆ. ಇದು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುತ್ತದೆ. ಪ್ರಮುಖ ಜಾಗತಿಕ ಲಾಜಿಸ್ಟಿಕ್ಸ್ ಪೂರೈಕೆದಾರರಿಂದ ನಡೆಸಲ್ಪಡುತ್ತದೆ.