ಹಾಸನ: ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ದರ ಶೇಕಡಾ 5 ಕ್ಕಿಂತ ಕಡಿಮೆ ಬರುವವರೆಗೆ ಯಾವುದೇ ಕಾರಣಕ್ಕೂ ಲಾಕ್ಡೌನ್ ತೆರವು ಮಾಡದೇ ಜೂ.30ರ ವರೆಗೂ ಮುಂದುವರೆಸಿ, ಇಲ್ಲದಿದ್ದರೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಚ್.ಡಿ. ರೇವಣ್ಣ ಎಚ್ಚರಿಸಿದ್ದಾರೆ.
ಜೂನ್ ಮತ್ತು ಜುಲೈ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ ಕಾಲೇಜುಗಳನ್ನು ತೆರೆಯಲಿ. ಜೊತೆಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತಿಯ ಪಿ.ಯು.ಸಿ. ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಲಿ. ಮಂತ್ರಿಗಳು ತಮಗೆ ಕಮಿಷನ್ ಬರುತ್ತಿಲ್ಲ ಎಂದು ತಮ್ಮ ಸ್ವಾರ್ಥಕ್ಕೆ ಲಾಕ್ಡೌನ್ ತೆರವು ಮಾಡಿ ಎಂದು ಹೇಳಬಾರದು. ಸ್ವಲ್ಪ ದಿನ ಕಮಿಷನ್ ಪಡೆಯುವುದನ್ನು ನಿಲ್ಲಿಸಿ ಜನರ ಆರೋಗ್ಯದ ಕಡೆಗೆ ಒತ್ತು ನೀಡಿ ಎಂದು ಟೀಕಿಸಿದರು.
ಕೆಲವರು ಕೋವಿಡ್ ಚಿಕಿತ್ಸೆಗೆ ಹಣ ನೀಡಲು ಮನೆ, ಹೊಲ ಹಾಗೂ ತಾಳಿ ಮಾರಾಟ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಈ ಸಂಬಂಧ ಸಿಎಂಗೆ ಮನವಿ ಮಾಡಿದ್ದೇನೆ. ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು ಅಥವಾ ಶೇಕಡಾ 50ರಷ್ಟು ಖರ್ಚನ್ನಾದರೂ ಸರ್ಕಾರ ಭರಿಸಬೇಕು ಎಂದು ಅವರಿಗೆ ಮನವರಿಕೆ ಮಾಡಿದ್ದೇನೆ . ಈ ಹಿನ್ನೆಲೆ ಅವರು ಘೋಷಣೆ ಮಾಡಲಿ ಎಂದರು.
ಕೋವಿಡ್ ಮೊದಲು ಮತ್ತು ಎರಡನೇ ಅಲೆಯಿಂದ ರಾಜ್ಯದಲ್ಲಿ 25 ಸಾವಿರ ಹಾಗೂ ಜಿಲ್ಲೆಯಲ್ಲಿ ಲೆಕ್ಕದ ಪ್ರಕಾರ 1 ಸಾವಿರ ಜನ ಮೃತಪಟ್ಟರೆ ಲೆಕ್ಕಕ್ಕೆ ಸಿಗದೇ ಇರುವ ಹೆಚ್ಚುವರಿ ಸಾವಿರ ಮಂದಿ ಸೇರಿದರೆ ಒಟ್ಟು 2 ಸಾವಿರ ಮಂದಿ ಮೃತಪಟ್ಟಿದ್ದಾರೆ. ಮೇ 14 ರಂದು ಜಿಲ್ಲೆಯಲ್ಲಿ 2,220 ಜನರಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ಅದರಲ್ಲಿ 2,200 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 15 ದಿನಗಳಿಂದ ಪಾಸಿಟಿವ್ ದರ ಶೇ.41ರಷ್ಟಿದೆ, ಕಳೆದ 15 ದಿನದಲ್ಲಿ 350 ಮಂದಿ ಮೃತಪಟ್ಟಿದ್ದಾರೆ ಎಂದರು.
ಕೋವಿಡ್ ನಿಯಂತ್ರಿಸಲು ಜಾರಿ ಮಾಡಿರುವ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಹಂತದಲ್ಲಿ 1300 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದರೂ ಅದೇ ಇನ್ನೂ ತಲುಪಿಲ್ಲ. ಲಾಕ್ಡೌನ್ ಇರುವುದರಿಂದ, ದುಡಿವ ಶ್ರಮಿಕ ವರ್ಗ ಎಲ್ಲಿ ಆನ್ಲೈನ್ ಮೂಲಕ ಅರ್ಜಿ ಹಾಕಲು ಹೋಗುತ್ತಾರೆ? ಈಗ ಮತ್ತೆ ಎರಡನೇ ಹಂತದ ಪ್ಯಾಕೇಜ್ ಘೋಷಣೆಗೆ ಮುಂದಾಗಿದ್ದಾರೆ. ಗ್ರಾಮೀಣ ಭಾಗದ ಶೇಕಡಾ 40 ರಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದು, ಕೋವಿಡ್ ಕಾರಣದಿಂದ ಅವರಿಗೂ ಕೆಲಸ ಇಲ್ಲದಾಗಿದೆ. ಈ ಬಾರಿ ರೈತರು, ಮಡಿವಾಳರು, ಮನೆ ಕೆಲಸ ಮಾಡುವವರು, ಕೂಲಿ ಕಾರ್ಮಿಕರು, ಹೂವು ಬೆಳೆಗಾರರು, ಆಟೊ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮರಗೆಲಸ ಮಾಡುವವರು, ಟೈಲರ್ಗಳು, ಸವಿತಾ ಸಮಾಜದವರನ್ನು ಪರಿಗಣಿಸಿ ಅವರಿಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.