ಬೆಂಗಳೂರು: "ಮೈಸೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು ತಮ್ಮನ್ನು ಶಾಶ್ವತವಾಗಿ ತವರು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದಿದ್ದೀರಾ ..? " ಎಂದು ಖಾರವಾಗಿ ಪಕ್ಷದ ಹೈಕಮಾಂಡ್ಗೆ ಹೇಳಿ ಮೈಸೂರು ಸೀಟನ್ನು ಹಸ್ತದ ತೆಕ್ಕೆಗೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಂಡಿದ್ದಾರೆ.
ದಕ್ಷಿಣ ಕರ್ನಾಟಕದ ಮೈಸೂರು ಲೋಕಸಭೆ ಕ್ಷೇತ್ರ ಸಿದ್ದರಾಮಯ್ಯನವರ ತವರು ಜಿಲ್ಲೆ. ಆದರೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವೆ ಸೀಟು ಹಂಚಿಕೆ ಸಂದರ್ಭದಲ್ಲಿ ರಾಜಕೀಯ ಪ್ರಹಸನವೇ ನಡೆದುಹೋಯಿತು.
ಕಾಂಗ್ರೆಸ್- ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಸ್ವತಃ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರು ಮೈಸೂರನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಅದು ಹೈಕಮಾಂಡ್ ಅಂಗಳಕ್ಕೆ ಹೋಯಿತು. ಮಾಜಿ ಪ್ರಧಾನಿ ದೇವೇಗೌಡರು ಮೈಸೂರು ಕ್ಷೇತ್ರ ಜೆಡಿಎಸ್ಗೆ ಬೇಕೇಬೇಕೆಂದು ಪಟ್ಟುಹಿಡಿದರು. ಜೆಡಿಎಸ್ ಅಪೇಕ್ಷಿಸಿದ ಇತರ ಸೀಟುಗಳನ್ನು ನೀಡಿದ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಮೈಸೂರು ವಿಚಾರದಲ್ಲಿ ಮಾತ್ರ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಮೈಸೂರನ್ನು ಜೆಡಿಎಸ್ಗೆ ಬಿಟ್ಟಕೊಡಲು ಸಾಧ್ಯವೇ ಎಂದು ಕೇಳಿದಾಗ ಕೆರಳಿದ ಸಿದ್ದರಾಮಯ್ಯ " ಮೈಸೂರನ್ನು ಜೆಡಿಎಸ್ ಗೆ ನೀಡಿ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾಗಲಕೋಟೆಯ ಬಾದಾಮಿಯಲ್ಲಿ ಗೆದ್ದಿರುವ ನನ್ನನ್ನು ಮೈಸೂರಿಂದ ಗಡಿಪಾರು ಮಾಡುವ ಯೋಚನೆ ಇದೆಯೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಅಸಮಾಧಾನದ ತೀವ್ರತೆ ಅರಿತ ಹೈಕಮಾಂಡ್ ಅಂತಿಮವಾಗಿ ಮೈಸೂರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಜೆಡಿಎಸ್ಗೆ ತಿಳಿಸಿತು. ಇದರಿಂದ ಬೇಸರಗೊಂಡ ಮಾಜಿ ಪ್ರಧಾನಿ ದೇವೇಗೌಡರನ್ನು ಕಾಂಗ್ರೆಸ್ ಪಕ್ಷದ ಹಾಲಿ ಸಂಸದರಿರುವ " ತುಮಕೂರು " ಕ್ಷೇತ್ರ ನೀಡುವುದಾಗಿ ತಿಳಿಸಿ ಸಮಾಧಾನಪಡಿಸಿತು.
ಹೈಕಮಾಂಡ್ ಬಳಿ ಪಟ್ಟು ಹಿಡಿದು ಮೈಸೂರು ಕ್ಷೇತ್ರವನ್ನು ಪಡೆದಿರುವ ಸಿದ್ದರಾಮಯ್ಯನವರ ಮುಂದೆ ಈಗ ಹಲವಾರು ಸವಾಲುಗಳಿವೆ. ಮೈಸೂರು ಕ್ಷೇತ್ರದಲ್ಲಿ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಚುನಾವಣೆ ರಾಜಕೀಯ ಮಾಡಿ ಸಿದ್ದರಾಮಯ್ಯ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಇದಕ್ಕೆ ಬಿಜೆಪಿಯ ಸಹಕಾರವೂ ಇತ್ತು...!
ಮೈತ್ರಿ ಪಕ್ಷಗಳ ಸೀಟು ಹಂಚಿಕೆಯಲ್ಲಿ ಜೆಡಿಎಸ್ಗೆ ಸೆಡ್ಡು ಹೊಡೆದು ಕ್ಷೇತ್ರ ಉಳಿಸಿಕೊಂಡಿರುವ ಸಿದ್ದರಾಮಯ್ಯ, ಈ ಬಾರಿಯ ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಎದುರಿಸಬೇಕಾಗಿದೆ. ಒಂದು ಕಡೆ ಜೆಡಿಎಸ್ನ ಒಳರಾಜಕೀಯ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ವಿರೋಧ, ಮೋದಿ ಪರವಾದ ಬಿಜೆಪಿ ಅಲೆ, ಮೈತ್ರಿ ಸರಕಾರದ ಗೊಂದಲದ ಆಡಳಿತ ನಡುವೆ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರಾ ಎನ್ನುವ ಕುತೂಹಲ ರಾಜಕೀಯವಾಗಿ ಮೂಡಿದೆ.
ಹಠಕ್ಕೆ ಬಿದ್ದು ಮೈಸೂರು ಕ್ಷೇತ್ರ ಪಡೆದಿರುವ ಸಿದ್ದರಾಮಯ್ಯನವರಿಗೆ ಜೆಡಿಎಸ್ ಮತ್ತು ಪಕ್ಷದ ಅದ್ಯಕ್ಷ ವಿಶ್ವನಾಥ ಅವರು ಪ್ರಾಮಾಣಿಕವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ. ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸಿದರೆ ಗೆಲವು ಸುಲಭ. ಕಳೆದ 2004ರ ಲೋಕಸಭೆ ಚುನಾವಣೆಯ ಅಂಕಿ ಅಂಶಗಳು ಸಹ ಇದನ್ನು ಸ್ಪಷ್ಟಪಡಿಸುತ್ತವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 5.ಲಕ್ಷದ 3 ಸಾವಿರ, ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿಶ್ವನಾಥ್ 4.72 ಲಕ್ಷ, ಜೆಡಿಎಸ್ನ ಅಭ್ಯರ್ಥಿ ಚಂದ್ರಶೇಖರಯ್ಯ. 1.38 ಲಕ್ಷ ಮತಗಳನ್ನು ಪಡೆದಿದ್ದರು.
ಮೈಸೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿದಾನಸಭೆ ಕ್ಷೇತ್ರಗಳು ಬರಲಿದ್ದು ಚಾಮರಾಜ, ಕೃಷ್ಣರಾಜ,ವಿರಾಪೇಟೆ, ಮಡಿಕೇರಿ ಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ವರುಣಾ ದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಶಾಸಕರ ಸಂಖ್ಯೆಯ ಆಧಾರದಲ್ಲಿ ಹೇಳುವುದಾರೆ ಕಾಂಗ್ರೆಸ್ ಗೆಲುವು ಕಷ್ಟ ಆದರೆ ಕಳೆದ ಲೋಕಸಭೆ ಚುನಾವಣೆ ಮತದಾನವು ಇಬ್ಬರೂ ಒಟ್ಟಾದರೆ ಹಸ್ತದ ಗೆಲವು ಸುಲಭವೆಂದು ಹೇಳುತ್ತದೆ.
ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಸಾಧಿಸಿ ಚಾಮುಂಡೇಶ್ವರಿ ಚುನಾವಣೆಯಲ್ಲಿ ಆದ ಸೋಲಿನ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಲೋಕಸಭೆ ಚುನಾವಣೆಯನ್ನ ಒಂದು ಉತ್ತಮ ಅವಕಾಶವನ್ನಾಗಿ ಉಪಯೋಗಿಸಿಕೊಳ್ಳಬೇಕೆನ್ನುವುದು ಸಿದ್ದರಾಮಯ್ಯ ನವರ ತಂತ್ರವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ವಿಜಯಶಂಕರ್ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಒಲವು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದರೆ ರಾಜಕೀಯದಲ್ಲಿ ಸಿದ್ದರಾಮಯ್ಯ ನವರ ಖದರು ಮತ್ತಷ್ಟು ಹೆಚ್ಚಾಗುತ್ತದೆ. ಸೋತರೆ ....ಇರಲಾರದೇ ಇರುವೆ ಬಿಟ್ಟುಕೊಂಡ ಹಾಗೆ ಆಗುತ್ತದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತದೆ.