ರಾಮನಗರ : ಜಿಲ್ಲೆಯಲ್ಲಿನ ಕೊರೊನಾ ನಿರ್ವಹಣೆ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಝೂಮ್ ಮೀಟಿಂಗ್ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಅವರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಈ ಸಭೆಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಭಾಗವಹಿಸಿದ್ದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು :
- ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ. ಎಷ್ಟು ಜನ ಹೋಂ ಐಸೋಲೇಟ್ ಆಗಿದ್ದಾರೆ. ಪಂಚಾಯತ್‌ನಿಂದ ಕೊರೋನಾ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ
- ಕೊರೊನಾ ಸೋಂಕಿತರಿಗೆ RTPCR, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಆಗ್ತಿದೆಯೇ. ಡಿಸ್ಚಾರ್ಜ್ ಮಾಡೋಕೆ ಮುಂಚೆ ರಕ್ತ ಪರೀಕ್ಷೆ ನಡೆಸಲು ಸೂಚನೆ
- ರಾಮನಗರದಲ್ಲಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ವ್ಯವಸ್ಥೆ ಕುರಿತು ಮಾಹಿತಿ.
- ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂಬ ಸೂಚನೆ
- ಗ್ರಾಮ ಪಂಚಾಯತ್‌ಗಳಲ್ಲಿ ಕೋವಿಡ್ ತುರ್ತು ನಿಧಿಯಲ್ಲಿ ಮತ್ತು 15ನೇ ಹಣಕಾಸಿನಲ್ಲಿ ನಿರ್ಗತಿಕರನ್ನ, ಕಡುಬಡವರನ್ನ ಗುರುತಿಸಿ ವಿಶೇಷ ಪ್ರಾತಿನಿಧ್ಯದ ಮೇಲೆ ಆಹಾರದ ಕಿಟ್ಗಳನ್ನ ನೀಡಬೇಕೆಂದು ಸೂಚನೆ
ಇನ್ನು, ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ವ್ಯಾಕ್ಸಿನ್ ಆಗಿದೆ. ರೆಮ್ಡಿಸಿವರ್ ಕೊರತೆ ಇದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದರು.
ಈವರೆಗೆ ಸುಮಾರು 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ವ್ಯಾಕ್ಸಿನ್ ನೀಡಲಾಗಿದೆ, ಕೊರೊನಾ ಕೇರ್ ಸೆಂಟರ್ಗಳಲ್ಲಿ, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಕ್ರಮಕೈಗೊಳ್ಳಲು ಸೂಚಿಸಿದರು.
ಇನ್ನು, ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಆ್ಯಂಟಿ ಬಾಡಿ ಟೆಸ್ಟ್ ಮಾಡಬೇಕು. ಇದರ ಬಗ್ಗೆ ಡಿಹೆಚ್ಒ ಮತ್ತು ಟಿಹೆಚ್ಒ ಹೆಚ್ಚಿನ ಗಮನಹರಿಸಬೇಕು. ಗ್ರಾಮ ಪಂಚಾಯತ್‌ನಿಂದ ಪ್ರತಿ ಹಳ್ಳಿಗಳಲ್ಲೂ ಜನರಲ್ಲಿ ಕೊರೊನಾ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.