ಬೆಂಗಳೂರು: ಬಿಟಿಎಂ ಕ್ಷೇತ್ರದಲ್ಲಿ 24x7 ತುರ್ತು ಟ್ರಯಾಜ್ ಸೆಂಟರ್, ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ಸಿದ್ಧವಾಗಿದ್ದು, ಜನರು ಭಯ ಬಿಟ್ಟು ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಜನರಿಗೆ ಕರೆ ನೀಡಿದರು.
ಬಿಟಿಎಂ ವಿಧಾನ ಸಭಾ ಕ್ಷೇತ್ರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬಿಬಿಎಂಪಿ, ಡಾ. ಬಂಡಾರಿ, ಡಾ.ಶ್ರೀತೇಜಾ ಹಾಗೂ ಪ್ರೀತಿ ಜೈನ್ ಸಹಯೋಗದೊಂದಿಗೆ ನಿರ್ಮಾಣ ಆಗಿರುವ 24x7 ತುರ್ತು ಟ್ರಯಾಜ್ ಸೆಂಟರ್, ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಬಿಜೆಪಿ ಶಾಸಕರಿಂದ ಹಾಗೂ ಬಿಜೆಪಿ ಬೆಂಬಲಿತ ಸಹಚರರ ಪ್ರಭಾವದಿಂದಾಗಿ ಬೆಡ್ ಬ್ಲಾಕಿಂಗ್ ದಂಧೆ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಬಹಳ ಕಷ್ಟಕರವಾಗಿದೆ. ಜನರಿಗೆ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂಕಷ್ಟದಿಂದ ದೂರ ಮಾಡಲು ಕೋವಿಡ್ ಪೀಡಿತರಿಗೆ ಸೂಕ್ತ ಬೆಡ್ ವ್ಯವಸ್ಥೆ ಹಾಗೂ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ನಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.
ಜನರು ಬೆಡ್ ಬುಕಿಂಗ್ ಮಾಡುವ ಅಗತ್ಯವೇ ಇಲ್ಲ. ಯಾವುದೇ ತೊಂದರೆ ಆದರೂ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಇಲ್ಲಿಗೆ ಬಂದರೆ ಸಾಕು ಅವರನ್ನ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಕೊರೊನಾ ನೆಗೆಟಿವ್ ಇದ್ದರೆ ಅವರಿಗೆ ಪ್ರತೇಕ ಚಿಕಿತ್ಸಾ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ಪೀಡಿತರಿಗೆ ಇಲ್ಲಿ ಪ್ರಾಥಮಿಕ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಕೋರಮಂಗಲದ ಇಂಡೋ ಸ್ಟೇಡಿಯಂ ನಲ್ಲಿ 250 ಸಾಮಾನ್ಯ ಬೆಡ್, 50 ಆಕ್ಸಿಜನ್ ಬೆಡ್, ಹಾಗೂ ಆಡುಗೋಡಿಯ ಮೈಕೋ ಬಾಷ್ ಕಂಪನಿಯ ಹತ್ತಿರ 70 ಸಾಮಾನ್ಯ ಬೆಡ್, 45 ಆಕ್ಸಿಜನ್ ಬೆಡ್ ಮತ್ತು ಜನರಲ್ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದರ ಸೇವೆಗಾಗಿ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ 9341191411 ಸಂಖ್ಯೆಗೆ ಕರೆ ಮಾಡಬಹುದಾಗಿದೆ.