ಬೆಂಗಳೂರು: ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ಇದೇ ತಿಂಗಳು 29 ರಂದು ಚುನಾವಣೆ ನಡೆಯಲಿದೆ. ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಅವಧಿ ಜೂ. 30 ರಂದು ಮುಗಿಯಲಿದ್ದು, ಈ ಸ್ಥಾನದ ಮೇಲೆ ಹಲವು ಮಂದಿ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಜೆಡಿಎಸ್ ವರಿಷ್ಠರ ಮೇಲೆ ಆಕಾಂಕ್ಷಿಗಳು ಒತ್ತಡ ಹಾಕಲು ಮುಂದಾಗಿದ್ದು, ವರಿಷ್ಠರು ಮಾತ್ರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಆಧಾರದ ಮೇಲೆ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ಆ ಸ್ಥಾನಕ್ಕೆ 8 ರಿಂದ 10 ಮಂದಿ ಆಕಾಂಕ್ಷಿಗಳಿದ್ದಾರೆ.
ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಮರು ಆಯ್ಕೆ ಬಯಸಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಇನ್ನೂ ಹಲವು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ.
ಇನ್ನೊಂದು ಅವಧಿಗೆ ಅವಕಾಶ ನೀಡುವಂತೆ ಶರವಣ, ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಮಾಜಿ ಶಾಸಕ ಕೋನರೆಡ್ಡಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ. ರಾಜ್ಯಸಭೆಗೆ ಈ ಬಾರಿ ಸ್ಪರ್ಧೆ ಮಾಡದಿರುವ ಕುಪೇಂದ್ರರೆಡ್ಡಿ ಅವರ ಹೆಸರು ಕೂಡ ವಿಧಾನ ಪರಿಷತ್ ಚುನಾವಣೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿದೆ. ಆರ್. ಪ್ರಕಾಶ್ ಅವರು ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪರಿಷತ್ ಸದಸ್ಯರಾದ ಕಾಂಗ್ರೆಸ್ ನ ನಸೀರ್ ಅಹಮ್ಮದ್, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಜಯಮ್ಮ, ಹೆಚ್.ಎಂ. ರೇವಣ್ಣ, ಜೆಡಿಎಸ್ ಸದಸ್ಯ ಟಿ.ಎ. ಶರವಣ ಮತ್ತು ಪಕ್ಷೇತರ ಯು.ಡಿ. ಮಲ್ಲಿಕಾರ್ಜುನ್ ಅವರ ಸದಸ್ಯತ್ವ ಅವಧಿ ಜೂ. 30ಕ್ಕೆ ಮುಗಿಯಲಿದೆ. ನಿನ್ನೆಯಷ್ಟೇ ಈ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಪ್ರಸ್ತುತ ವಿಧಾನಸಭೆಯಲ್ಲಿ ಬಲಾಬಲ ಈ ರೀತಿ ಇದೆ. 223 ಶಾಸಕರಿದ್ದಾರೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಸ್ಪೀಕರ್ ಸೇರಿ 117 ಶಾಸಕರ ಸಂಖ್ಯೆ ಇದೆ. ಕಾಂಗ್ರೆಸ್ ಶಾಸಕರು 68, ಜೆಡಿಎಸ್ ಶಾಸಕರು 34, ಪಕ್ಷೇತರ 2 ಮತ್ತು ಬಿಎಸ್‌ಪಿ 1, ನಾಮನಿರ್ದೇಶನ ಸದಸ್ಯರು ಒಬ್ಬರು ಇದ್ದಾರೆ. ಎರಡು ಶಾಸಕ ಸ್ಥಾನ ಖಾಲಿ ಇವೆ.
ವಿಧಾನಸಭೆಯ ಹಾಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ಅದರಂತೆ ಪ್ರಸ್ತುತ ಇರುವ ಸಂಖ್ಯಾ ಬಲದಂತೆ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲು ಅವಕಾಶವಿದೆ.
ಪರಿಷತ್ ಚುನಾವಣೆ ಯಾವಾಗ:
ಜೂನ್ 29 ರಂದು ಚುನಾವಣೆ ನಡೆಯಲಿದ್ದು, ಜೂ. 11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಜೂ.18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಜೂ. 19 ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ. 22 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಜೂ.29 ರಂದು ಮತದಾನ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.