ಕೊಪ್ಪಳ: ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್‌ಕುಮಾರ್ ಅಭಿನಯದ 'ಪ್ಯಾಡ್‌ಮನ್' ಸಿನಿಮಾದಿಂದ ಪ್ರೇರಣೆಗೊಂಡ ಮಹಿಳೆವೋರ್ವಳು ನೈಸರ್ಗಿಕ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಿ ಋತುಚಕ್ರದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾದ್ರೆ ಆ ಪ್ಯಾಡ್ ವುಮನ್ ಕುರಿತು ಕಂಪ್ಲೀಟ್ ಈ ಸ್ಟೋರಿ ಇಲ್ಲಿದೆ ನೋಡಿ...
ಹೌದು, ಕೊಪ್ಪಳದ ಗವಿಶ್ರೀ ನಗರದ ನಿವಾಸಿಯಾಗಿರುವ ಭಾರತಿ ಗುಡ್ಲಾನೂರು ಎಂಬುವರೇ ಈ ಪ್ಯಾಡ್ ವುಮನ್. ಕಳೆದ ವರ್ಷ ತೆರೆಕಂಡಿದ್ದ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್‌ಮನ್ ಸಿನಿಮಾದಿಂದ ಭಾರತಿ ಗುಡ್ಲಾನೂರು ಪ್ರೇರಣೆಗೊಂಡು, ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ತಯಾರಿಸಿ ನೀಡುತ್ತಿದ್ದಾರೆ. ಈ ಮೂಲಕ ಋತುಚಕ್ರದ ಬಗೆಗೆ ಅರಿವು ಮೂಡಿಸುತ್ತಿದ್ದಾರೆ. ಋತುಚಕ್ರದ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ಯಾನಿಟರಿ ಪ್ಯಾಡ್ಗಳನ್ನು ಮಹಿಳೆಯರು ಬಳಸಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಭಾರತಿ ಕಳೆದೊಂದು ವರ್ಷದಿಂದ ನೈಸರ್ಗಿಕವಾದ ಸ್ಯಾನಿಟರಿ ಪ್ಯಾಡ್ಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಬ್ರಾಂಡ್ನ ಸ್ಯಾನಿಟರಿ ಪ್ಯಾಡ್ಗಳು ಲಭ್ಯವಿವೆ. ಅವುಗಳಲ್ಲಿ ಪ್ಲಾಸ್ಟಿಕ್ ಇರುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಯಾವುದೇ ಅಡ್ಡ ಪರಿಣಾಮವಿಲ್ಲದ, ವಾಸನೆ ತಡೆಗಟ್ಟುವ ಈ ಪ್ಯಾಡ್ಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸುತ್ತಿದ್ದು, ಕಡಿಮೆ ಬೆಲೆಗೆ ನೇರವಾಗಿ ತಲುಪಿಸುತ್ತಿದ್ದೇವೆ. ಇದಕ್ಕೆಲ್ಲಾ ಪ್ಯಾಡ್ಮನ್ ಚಿತ್ರವೇ ಪ್ರೇರಣೆ ಎನ್ನುತ್ತಾರೆ ಭಾರತಿ ಗುಡ್ಲಾನೂರು.
ಗ್ರಾಮೀಣ ಪ್ರದೇಶದಲ್ಲಿನ ಬಹಳಷ್ಟು ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಬಳಕೆ ಮಾಡುತ್ತಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಭಾರತಿ ಗುಡ್ಲಾನೂರು ವಿಶೇಷವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ಕಾನ್ಸೆಪ್ಟ್ಗಳೊಂದಿಗೆ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್ ಪಡೆದುಕೊಳ್ಳುವ ಬಗ್ಗೆ ಬ್ಯಾಂಕ್ ಪಾಸ್ಬುಕ್ ರೀತಿಯಲ್ಲಿ ವಿವರಗಳನೊಳಗೊಂಡ ಖಾತೆ ಪುಸ್ತಕ ಮಾಡಿದ್ದಾರೆ. ಇದು ಈ ಬಾರಿಯ ವಿಶೇಷ ಪರಿಕಲ್ಪನೆ. ಅಲ್ಲದೆ ಭಾರತಿ, ಸುಮಾರು 8 ಜನ ಮಹಿಳೆಯರಿಗೆ ಉದ್ಯೋಗವಕಾಶ ಕೂಡ ಕಲ್ಪಿಸಿದ್ದಾರೆ.
ಒಟ್ಟಾರೆಯಾಗಿ ಸಿನಿಮಾಗಳು ಸಾಮಾಜಿಕ ಪರಿವರ್ತನೆಯ ಸಂದೇಶ ಸಾರುತ್ತವೆ ಅನ್ನೋದನ್ನು ಭಾರತಿ ಅವರ ಕೆಲಸವೇ ಸಾಕ್ಷಿಯಂತಿದೆ. ಮಹಿಳೆಯರ ಜಾಗೃತಿಗೆ ಕಾರಣವಾದ ಪ್ಯಾಡ್ಮನ್ ಸಿನಿಮಾ ಇಲ್ಲೋರ್ವ ಪ್ಯಾಡ್ ವುಮನ್ ಬೆಳೆಯಲು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.