ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿರುವ ಅರ್ಚಕರಿಗೆ ಸರ್ಕಾರ ನೆರವಿನ ಹಸ್ತ ಚಾಚಿದೆ.
ಸಿ ದರ್ಜೆಯ ದೇವಾಲಯಗಳ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರಿಗೆ ಮತ್ತು ಸಿಬ್ಬಂದಿಗೆ ಆಹಾರ ಕಿಟ್ ನೀಡಲು ಆದೇಶಿಸಲಾಗಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ರಾಜ್ಯದ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಒಳಪಡುವ 'ಸಿ' ದರ್ಜೆಯ ದೇವಾಲಯದಲ್ಲಿ ಅರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಯಾಯ ಜಿಲ್ಲೆಯ ಅನ್ನದಾಸೋಹ ನಡೆಸುವ 'ಎ' ಮತ್ತು 'ಬಿ' ದರ್ಜೆಯ ದೇವಾಲಯಗಳಲ್ಲಿ ಲಭ್ಯವಿರುವ ಅಕ್ಕಿ ಮತ್ತು ಇತರೆ ದವಸ ಧಾನ್ಯಗಳನ್ನು ಆಹಾರದ ಕಿಟ್‌ಗಳ ರೂಪದಲ್ಲಿ ತಯಾರಿಸಿ ನೀಡಲು ಸೂಚಿಸಿದೆ. ಉಳಿಕೆ ಆಹಾರ ಧಾನ್ಯಗಳನ್ನು ಕಷ್ಟದಲ್ಲಿರುವ ಸಾರ್ವಜನಿಕರಿಗೆ ಆಹಾರದ ಕಿಟ್ ತಯಾರಿಸಿ ನೀಡಲು ನಿರ್ದೇಶನ ನೀಡಿದೆ.
ಆಹಾರ ಧಾನ್ಯ ಲಭ್ಯವಿಲ್ಲದಿದ್ದಲ್ಲಿ ಅಥವಾ ಸಾಲದಿದ್ದಲ್ಲಿ 'ಸಿ' ದರ್ಜೆಯ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ ದೇವಾಲಯದ ನಿಧಿಯಿಂದ ವೆಚ್ಚ ಭರಿಸಿ ಆಹಾರದ ಕಿಟ್‌ಗಳನ್ನು ವಿತರಿಸಲು ಆದೇಶಿಸಲಾಗಿದೆ.
ಲಾಕ್‌ಡೌನ್ ಹಿನ್ನೆಲೆ ಏ. 24ರಿಂದ ಎಲ್ಲಾ ಧಾರ್ಮಿಕ ಸಂಸ್ಥೆಗಳು/ಪೂಜಾ ಸ್ಥಳಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯದ ಪೂಜಾ ಕೈಂಕರ್ಯಗಳನ್ನು ಭಕ್ತಾಧಿಗಳ ಅನುಪಸ್ಥಿತಿಯಲ್ಲಿ ದೇವಾಲಯದ ಅರ್ಚಕರ ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಕಂದಾಯ ಸಚಿವ ಹಾಗೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರು ಚರ್ಚಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 'ಸಿ' ದರ್ಜೆಯ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಕಷ್ಟದಲ್ಲಿರುವ ಸಾರ್ವಜನಿಕರಿಗೆ ಆಹಾರದ ಕಿಟ್ ನೀಡುವಂತೆ ನಿರ್ದೇಶಿಸಿದ್ದಾರೆ.
ಈಗಾಗಲೇ ಕೆಲವು ಅನ್ನದಾಸೋಹ ನಡೆಸುವ 'ಎ' ಮತ್ತು 'ಬಿ' ದರ್ಜೆ ದೇವಾಲಯಗಳಲ್ಲಿ ಭಕ್ತಾಧಿಗಳಿಂದ ಸಂಗ್ರಹವಾದ ಅಕ್ಕಿ ಮತ್ತು ಇತರೆ ದವಸಧಾನ್ಯಗಳು ದೇವಾಲಯದಲ್ಲಿರುತ್ತದೆ. ಪ್ರಸ್ತುತ ಕೋವಿಡ್-19 ಕಾರಣದಿಂದ ಅನ್ನದಾಸೋಹವನ್ನು ನಿಲ್ಲಿಸಲಾಗಿರುತ್ತದೆ. ಈ ಕಾರಣದಿಂದ ದಾಸ್ತಾನಿನಲ್ಲಿರುವ ಅಕ್ಕಿ ಮತ್ತು ದವಸ ಧಾನ್ಯಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ದವಸ ಧಾನ್ಯಗಳನ್ನು ಈ ಹಿಂದೆ ಕೋವಿಡ್-19 ಮೊದಲ ಅಲೆಯ ಸಂದರ್ಭದಲ್ಲಿ 'ಸಿ' ದರ್ಜೆಯ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್‌ನ್ನು ನೀಡಿದಂತೆ ಈ ಬಾರಿಯೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ 'ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಕಷ್ಟದಲ್ಲಿರುವ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ.