ಮಂಗಳೂರು: ಮತ್ತೆ 'ಟೂಲ್ ಕಿಟ್' ಕಾರ್ಯತಂತ್ರ ದೇಶದಲ್ಲಿ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಅವ್ಯಾಹತವಾಗಿ ನಡೆಸುತ್ತಿರುವ ಟೀಕೆಗಳನ್ನು ಗಮನಿಸುವಾಗ ಕಾಂಗ್ರೆಸ್ನ ಇಕೋ ಸಿಸ್ಟಮ್ 'ಟೂಲ್ ಕಿಟ್' ಮಾರ್ಗದರ್ಶನದಂತೆ ಕೆಲಸ ಮಾಡುತ್ತಿರುವುದು ಜಗಜ್ಜಾಹೀರವಾಗಿದೆ. ಇದೊಂದು ರಾಷ್ಟ್ರ ವಿರೋಧಿ ಚಟುವಟಿಕೆ ಆಗಿರೋದರಿಂದ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖಾ ತಂಡ ಪತ್ತೆ ಮಾಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಅಟಲ್ ಕೇಂದ್ರದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ರಾಜಕೀಯ ಲಾಭ, ಸ್ವಾರ್ಥದ ಉದ್ದೇಶದಿಂದ ದೇಶದಲ್ಲಿ ಆತಂಕ ಸೃಷ್ಟಿ ಮಾಡುವಂತಹ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಮಣ್ಣುಪಾಲು ಮಾಡುವಂತಹ ಕಾರ್ಯ ನಡೆಸುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನಿನ ಅನ್ವಯ ಕ್ರಮ ಜರುಗಿಸಬೇಕು ಎಂದು ಎಚ್ಚರಿಸಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿಯ ಸಂಚು ನಡೆಸುತ್ತಿದೆ ಎಂಬುದನ್ನು ಸಾಂದರ್ಭಿಕ ಸಾಕ್ಷಿಗಳು ದೃಢಪಡಿಸಿವೆ. ಇಲ್ಲಿ ಕಾಂಗ್ರೆಸಿಗರು ಮೋದಿಯವರ ಪ್ರತಿಷ್ಠೆಗೆ ಕುಂದು ತರುವಂತಹ ಹುನ್ನಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಉನ್ನತಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಕೊಟ್ಟಿದ್ದರೆ ಕೋವಿಡ್ ಸೋಂಕನ್ನು ಭಾರತವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮರ್ಥವಾಗಿ ನಿಭಾಯಿಸಲು ಸಾಧ್ಯವಿತ್ತು. ಆದರೆ ಕಾಂಗ್ರೆಸ್ ತನ್ನ ವೈಫಲ್ಯವನ್ನು ಬಿಜೆಪಿ ಮೇಲೆ ಹಾಕಿ ಟೀಕೆ ಮಾಡಿ ತನ್ನ ನೀಚ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದರು.
140 ಕೋಟಿ ಜನರಿರುವ ದೇಶ ಭಾರತ ಮೊದಲ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರೋದನ್ನು ಕಂಡು ಕಾಂಗ್ರೆಸ್ ಧೃತಿ ಕಳೆದುಕೊಂಡಿದೆ. ಅಲ್ಲದೆ ಮೋದಿಯವರ ಮುತ್ಸದ್ದಿತನ, ಅವರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿಕೊಂಡ ರಾಜಕೀಯ ವರ್ಚಸ್ಸಿನಿಂದ ಕಾಂಗ್ರೆಸ್ನ 'ಟೂಲ್ ಕಿಟ್' ತಂತ್ರಗಾರಿಕೆಯ ಹೊರತಾಗಿಯೂ ಅಮೆರಿಕ, ಫ್ರಾನ್ಸ್, ಜರ್ಮನಿ, ಜಪಾನ್, ಸಿಂಗಾಪುರ್, ಕೊಲ್ಲಿ ರಾಷ್ಟ್ರಗಳಿಂದ ದೇಶಕ್ಕೆ ನಿರ್ವಹಣೆಗೆ ಅಗತ್ಯವಿರುವ ಆಕ್ಸಿಜನ್, ಔಷಧಿಗಳು, ರೆಮಿಡಿಸಿವಿರ್ ಇಂಜೆಕ್ಷನ್ಗಳು ಸಮರೋಪಾದಿಯಲ್ಲಿ ಭಾರತ ದೇಶಕ್ಕೆ ಹರಿದು ಬಂದಿವೆ. ಈ ಮೂಲಕ ಕಾಂಗ್ರೆಸ್ನ 'ಟೂಲ್ ಕಿಟ್' ತಂತ್ರಗಾರಿಕೆ ಪೂರ್ತಿ ವಿಫಲವಾಗಿದೆ ಎಂದು ಹೇಳಿದರು.
ಯಾವುದೇ ವೈರಸ್ಅನ್ನು ಯಾವುದೇ ದೇಶದ ಹೆಸರಿನೊಂದಿಗೆ ಜೋಡಿಸಬಾರದೆಂದು ಡಬ್ಲ್ಯುಎಚ್ಒ ಆದೇಶಕ್ಕೆ ವಿರೋಧವಾಗಿ ನಿರ್ಲಜ್ಜ ಕಾಂಗ್ರೆಸ್ ಪಕ್ಷ ಹಾಗೂ ಅದರ ಇಕೋ ಸಿಸ್ಟಮ್ ಎರಡನೇ ಅಲೆ ಸೋಂಕಿಗೆ ಕಾರಣವಾಗಿರುವ ವೈರಸ್ಅನ್ನು ಇಂಡಿಯಾ ವೇರಿಯೆಂಟ್, ಮೋದಿ ಸ್ಟ್ರೈನ್ ಎಂದು ಕರೆಯುತ್ತಿರುವುದು ಕಾಂಗ್ರೆಸ್ 'ಟೂಲ್ ಕಿಟ್' ಕಾರ್ಯತಂತ್ರಕ್ಕೆ ಒಳ್ಳೆಯ ನಿರ್ದರ್ಶನ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.