ಬೆಂಗಳೂರು: ಕರ್ನಾಟಕ ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್ಗೆ ಆಯ್ಕೆಗೊಂಡ ಏಳು ಸದಸ್ಯರು ಜೂನ್ 30ರಂದು ನಿವೃತ್ತಿ ಆಗುತ್ತಿರುವುದರಿಂದ ಅವರಿಂದ ತೆರವಾಗುವ ಸ್ಥಾನಗಳನ್ನು ತುಂಬಲು ವಿಧಾನ ಪರಿಷತ್ ಚುನಾವಣೆ ನಡೆಸಲು ಚುನಾವಣಾ ಆಯೋಗ ಇಂದು ಅಧಿಸೂಚನೆ ಹೊರಡಿಸಿದೆ.
ಎರಡು ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಇಂದು ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 18 ಕಡೆಯ ದಿನವಾಗಿದ್ದು, ಜೂನ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 22ರಂದು ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಕಡೆಯ ದಿನವಾಗಿದೆ.
ಜೂನ್ 29ರಂದು ಮತದಾನ ನಡೆಯಲಿದ್ದು, ಅಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್ 29ರ ಸಂಜೆ 5 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದ್ದು, 30ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ.