ಚರೈಡಿಯೊ, (ಆಸ್ಸೋಂ) : ಕೈಕಾಲು ನೆಟ್ಟಗಿದ್ದು, ವಿದ್ಯಾವಂತರಾಗಿಯೂ ಮನೆಯಲ್ಲಿರ್ತಾರೆ. ಇಲ್ಲ ದೂರದ ಪ್ರವಾಸಕ್ಕೋ ಇನ್ನಾವುದೋ ಸುತ್ತಾಟಕ್ಕೋ ಹೋಗ್ತಾರೆಯೇ ಹೊರತು ಎಷ್ಟೋ ಮಂದಿ ಮತದಾನ ಮಾಡಲ್ಲ. ಆದರೆ, ಅಸ್ಸೋಂನ 104 ವರ್ಷದ ಅಜ್ಜಿಯೊಬ್ಬರು ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡೋದಕ್ಕೆ ಉತ್ಸಾಹ ತೋರುತ್ತಿದ್ದಾರೆ.
ಆ ಅಜ್ಜಿಯ ಹೆಸರು ಲಾಖಿ ಪಾಲ್. ವಯಸ್ಸು ಬರೋಬ್ಬರಿ 104 ವರ್ಷ. ಅಸ್ಸೋಂ ರಾಜ್ಯದ ಚರೈಡಿಯೊ ಬಳಿಯ ಮೊರಾನ ಶಾಂತಿಪುರ ಈಕೆಯ ಊರು. ಮುಂಬರುವ 2019ರ ಲೋಕಸಭಾ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸೋದಕ್ಕೆ ತುಂಬಾ ಉತ್ಸುಕತೆ ತೋರಿಸುತ್ತಿದ್ದಾರೆ. ಈವರೆಗಿನ ಅದ್ಯಾವುದೇ ಚುನಾವಣೆ ಬಂದರೂ ತಪ್ಪದೇ ತಮ್ಮ ಹಕ್ಕು ಚಲಾಯಿಸಿ ಬರುತ್ತಾರೆ ಅಜ್ಜಿ. ನನ್ನ ತಾಯಿ ಮತದಾನವನ್ನ ರಾಷ್ಟ್ರದ ಹೆಮ್ಮೆ ಅಂತಾ ಪರಿಗಣಿಸಬೇಕು. ನನ್ನ ತಾಯಿ ತಪ್ಪದೇ ಈ ಸಾರಿಯೂ ಮತದಾನ ಮಾಡ್ತಾರೆ ಅಂತಾ ಲಾಖಿ ಪಾಲ್ ಪುತ್ರಿ ಹೇಳಿಕೊಂಡಿದ್ದಾರೆ.
ಲಾಖಿ ಪಾಲ್‌ರ ಉತ್ಸಾಹಕ್ಕೆ ಚುನಾವಣಾ ಆಯೋಗವೂ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ. ವಯಸ್ಸು ಎಷ್ಟೇ ಆದರೂ ಶತಾಯುಷಿ ಮಾತ್ರ ತಮ್ಮ ಹಕ್ಕನ್ನು ಚಲಾಯಿಸುವ ಜವಾಬ್ದಾರಿಯನ್ನ ಮರೆತಿಲ್ಲ. ಅಜ್ಜಿಯ ನಡೆ ಉಳಿದವರಿಗೂ ಪ್ರೇರಣೆಯಾಗಿದೆ.