ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಮೇ-13 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮತದಾರರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.
ಎರಡೂ ಜಿಲ್ಲೆಗಳಿಂದ ಸೇರಿ ಒಟ್ಟು 13 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಹಾಲು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಎರಡು ಜಿಲ್ಲೆಗಳಲ್ಲಿ ಒಟ್ಟು 1364 ಜನ ಮತದಾರರಿದ್ದು, ಪ್ರತಿವೊಬ್ಬ ಮತದಾರರಿಗೂ ಭರ್ಜರಿ ಆಮಿಷಗಳನ್ನು ಒಡ್ಡಲಾಗುತ್ತಿದೆ.
ಪ್ರತಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಿಗೆ ಮತದಾನದ ಹಕ್ಕಿದೆ. ಆದ್ರೆ ಮತದಾನಕ್ಕೂ ಮೊದಲು ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನು ಕಾರ್ಯದರ್ಶಿ ಮೂಲಕ ನೀಡಲಾಗುತ್ತದೆ ಅನ್ನೋ ಕಾರಣಕ್ಕೆ ಕಾರ್ಯದರ್ಶಿಗೆ ಒಂದು ವಾಚ್ ಗಿಪ್ಟ್ ಆಗಿ ಕೊಡಲಾಗುತ್ತಿದೆಯಂತೆ. ಅಧ್ಯಕ್ಷರಿಗೆ ಒಂದು ಮತಕ್ಕೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ನಿಗದಿ ಮಾಡಲಾಗಿದೆ. ಪರಿಣಾಮ ಅಧ್ಯಕ್ಷರ ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನೇ ಕಳವು ಮಾಡಲಾಗುತ್ತಿದೆ. ಹಾಗಾಗಿ ಈಗಾಗಲೇ ಹಲವಾರು ಅಧ್ಯಕ್ಷರುಗಳು ತಮ್ಮ ಗುರುತಿನ ಚೀಟಿ ಹಾಗೂ ಡೆಲಿಗೇಷನ್ ಫಾರಂ ಕಳೆದಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸದ್ಯ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಿರ್ದೇಶಕರ ಸ್ಥಾನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಈಗಾಗಲೇ ಮಲಿಯಪ್ಪನಹಳ್ಳಿ, ಜಯಮಂಗಲ ಹಾಗೂ ಮಲಿಕನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರುಗಳು ತಮ್ಮ ಡೆಲಿಗೇಷನ್ ಫಾರಂ ಹಾಗೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಕಳೆದುಕೊಂಡಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಒಟ್ಟಾರೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ ಸದ್ಯ ಭಾರಿ ಸದ್ದು ಮಾಡುತ್ತಿದೆ. ಮತವೊಂದಕ್ಕೆ ಲಕ್ಷ ಲಕ್ಷ ಹಣ ನೀಡುತ್ತಿದ್ರೆ, ಬೆಲೆ ಬಾಳುವ ಮತದಾರನ ಗುರುತಿನ ಚೀಟಿಯನ್ನೇ ಕಳವು ಮಾಡಲಾಗುತ್ತಿದೆ. ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಧಿಕಾರಿಗಳು ಏನು ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.