ಬೆಳಗಾವಿ: ಮೈಕ್ರೋ ಕಂಟೇನ್ಮೆಂಟ್ ಜೋನ್ ಮಾಡೊದ್ರಿಂದ ಕೊರೊನಾ ಕೇಸ್ಗಳು ಕಡಿಮೆ ಆಗ್ತಿವೆ. ಹೀಗಾಗಿ ಐದಕ್ಕಿಂತ ಹೆಚ್ಚಿನ ಸೋಂಕಿತ ಪ್ರಕರಣಗಳು ಕಂಡುಬಂದ್ರೆ ಆ ಪ್ರದೇಶ ಸೀಲ್ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಿನೇ ದಿನೇ ಪಾಸಿಟಿವಿಟಿ ರೇಟ್ ಕಡಿಮೆ ಆಗ್ತಿದ್ದು, ಈಗಾಗಲೇ ಐದು ತಾಲೂಕುಗಳಲ್ಲಿ 5ಕ್ಕೂ ಕಡಿಮೆ ಪಾಸಿಟಿವಿಟಿ ರೇಟ್ ಬಂದಿದೆ. ಅದರಲ್ಲಿ ಬೆಳಗಾವಿ ಶಹರ ಮತ್ತು ತಾಲೂಕು, ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ಹೀಗಾಗಿ ಕೊರೊನಾ ತಡೆಗೆ ಸೋಂಕಿತರ ಮನೆಗಳಿಗೆ ಸೀಲ್ ಮಾಡಿ ಕಂಟೇನ್ಮೆಂಟ್ ಜೋನ್ ಮಾಡಲಾಗುವುದು ಎಂದರು.
ಹಳ್ಳಿಗಳಲ್ಲಿ ಐದು ಕೇಸ್ಗಳಿದ್ರೆ ಆ ಊರುಗಳನ್ನೇ ಸೀಲ್ಡೌನ್ ಮಾಡಬೇಕು. ಇದರ ಜೊತೆಗೆ ಎಸಿ, ತಹಶೀಲ್ದಾರ್ ಹಾಗೂ ಗ್ರಾಮಮಟ್ಟದ ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದಲ್ಲದೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೂಡ ಮನೆಮನೆಗೂ ಹೋಗಿ ಭೇಟಿ ನೀಡಿ ಸೋಂಕಿತ ಜನರಿಗೆ ಧೈರ್ಯದ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ಚಿಕ್ಕೋಡಿಗೆ ನಾಳೆ ಹೋಗುತ್ತೇನೆ. ಅಲ್ಲಿಯೂ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಆರ್ಟಿಪಿಸಿಆರ್ ಟೆಸ್ಟ್ನಿಂದ ವರದಿಗಳು ವಿಳಂಬ ಬರುತ್ತಿವೆ. ಇದರಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಹಳ್ಳಿಗಳಲ್ಲಿ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಟೆಸ್ಟ್ನಲ್ಲಿ ನೆಗಟಿವ್ ಬಂದು ಕೊರೊನಾ ಸೋಂಕಿತರ ಗುಣಲಕ್ಷಣಗಳು ಕಂಡುಬಂದ್ರೆ ಅಂತವರಿಗೆ ಸ್ಥಳದಲ್ಲೇ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುತ್ತಿದೆ. ಆದಷ್ಟು ಬೇಗ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ತರಲಾಗುವುದು ಎಂದರು.