ನವದೆಹಲಿ : ಕೊರೊನಾ ಹಿನ್ನೆಲೆ ಎರಡು ಬಾರಿ ಮುಂದೂಡಲ್ಪಟ್ಟ ಹಾಲ್ಮಾರ್ಕಿಂಗ್ ಮಾಡುವ ಅವಧಿ ಇದೀಗ ಕೊನೆಗೊಂಡಿದೆ. ಇಂದಿನಿಂದ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಇರುವ ಚಿನ್ನವನ್ನು ಮಾತ್ರ ಮಾರಾಟ ಮಾಡುವಂತೆ ಕೇಂದ್ರ ಸೂಚಿಸಿದೆ.
2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು 2019ರ ನವೆಂಬರ್‌ನಲ್ಲಿ ಸರ್ಕಾರ ಘೋಷಿಸಿತ್ತು. ಆದರೆ, ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಆಭರಣ ಮಾರಾಟಗಾರರು ಹೆಚ್ಚಿನ ಸಮಯ ಕೋರಿದ ನಂತರ ಜೂನ್ 1ರವರೆಗೆ ನಾಲ್ಕು ತಿಂಗಳು ಗಡುವು ನೀಡಿತ್ತು. ಇದೀಗ ಜೂನ್ 15 ರಿಂದ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕ್ ಇರಬೇಕು ಎಂದು ಸೂಚಿಸಿದೆ.
ಈ ಮೊದಲು ಇದನ್ನು 2021ರ ಜೂನ್ 1ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಸರಿಯಾದ ಸಮನ್ವಯ ಖಚಿತಪಡಿಸಿಕೊಳ್ಳಲು ಮತ್ತು ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಹಾನಿರ್ದೇಶಕ ಪ್ರಮೋದ್ ತಿವಾರಿ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಇನ್ನು, ಲೋಹದ ಶುದ್ಧತೆಯನ್ನು ಪ್ರಮಾಣೀಕರಿಸುವ ವಿಧಾನಕ್ಕೆ ಗೋಲ್ಡ್ ಹಾಲ್ಮಾರ್ಕಿಂಗ್ ಎನ್ನುತ್ತಾರೆ. ಭಾರತದಲ್ಲಿ ಚಿನ್ನದ ಹಾಲ್ಮಾರ್ಕಿಂಗ್ ಪ್ರಸ್ತುತ ಐಚ್ಛಿಕವಾಗಿದೆ. ಸರ್ಕಾರದ ಉಪಕ್ರಮವು ಚಿನ್ನ ಖರೀದಿದಾರರನ್ನು ಮಾರಾಟಗಾರರಿಂದ ಮೋಸಗೊಳಿಸದಂತೆ ರಕ್ಷಿಸುವ ಗುರಿಯನ್ನು ಹೊಂದಿದೆ.
ಚಿನ್ನದ ಬಗ್ಗೆ ಸರ್ಕಾರದ ಮಾರ್ಗಸೂಚಿಗಳು : ಭಾರತೀಯ ಆಭರಣಕಾರರು ಜೂನ್ 15 ರಿಂದ 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಚಿನ್ನದ ಹಾಲ್ಮಾರ್ಕ್ ನೋಂದಣಿ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲಾಗಿದೆ. ಚಿನ್ನವನ್ನು ಖರೀದಿಸುವ ಗ್ರಾಹಕರು, ಮಾಲೀಕರಿಂದ ಮೋಸ ಹೋಗದಂತೆ ರಕ್ಷಿಸುವ ಗುರಿ ಹೊಂದಿದೆ.