ಮುಂಬೈ: ಲೋಕಸಭಾ ಚುನಾವಣೆ ಫಲಿತಾಂಶವನ್ನು ದೇಶದ 130 ಕೋಟೆ ಜನರು ಮಾತ್ರವಲ್ಲ,ಜಗತ್ತಿನಾದ್ಯಂತ ಅದೆಷ್ಟೋ ಕುತೂಹಲದ ಕಣ್ಣುಗಳು ಕಾಯುತ್ತಿವೆ. ಇದರ ಮಧ್ಯೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ವ್ಯಯ ಮಾಡಿರುವ ವೆಚ್ಚದ ಮಾಹಿತಿ ಕೂಡ ಬಹಿರಂಗಗೊಂಡಿದೆ. ಫೇಸ್ಬುಕ್ನಲ್ಲಿ ಜಾಹೀರಾತು ನೀಡಲು ಯಾವ ಪಕ್ಷ ಎಷ್ಟು ಹಣ ನೀಡಿದೆ ಎಂಬುದರ ಮಾಹಿತಿ ಇಲ್ಲಿದೆ.
ಫೆ.19ರಿಂದ ಮೇ19 ರವರೆಗೆ ವಿವಿಧ ರಾಜಕೀಯ ಪಕ್ಷಗಳು 1,24,094 ಜಾಹೀರಾತುಗಳನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿವೆ. ಈ ಅಡ್ವಾರ್ಟೈಸ್‌ಮೆಂಟ್‌ಗಾಗಿ ಭಾರತೀಯ ಜನತಾ ಪಾರ್ಟಿ 4 ಕೋಟಿ ರೂ ಖರ್ಚು ಮಾಡಿದೆ. ಇನ್ನು ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆ ಪಕ್ಷ ಎಫ್‌ಬಿಗಾಗಿ 1.8ಕೋಟಿ ರೂ ಬಳಕೆ ಮಾಡಿದೆ. ಉಳಿದಂತೆ ಪ್ರಾದೇಶಿಕ ಪಕ್ಷಗಳಾದ ತೆಲುಗು ದೇಶಂ ಹಾಗೂ ವೈಎಸ್ಆರ್ ಕಾಂಗ್ರೆಸ್ ಮತ್ತು ಬಿಜೆಡಿ ಹೆಚ್ಚು ಹಣ ಖರ್ಚು ಮಾಡಿವೆ. ದೇಶದಲ್ಲಿ ನಡೆದ 7 ಹಂತದ ಮತದಾನಗಳಲ್ಲೂ ಈ ಜಾಹೀರಾತುಗಳು ಬಳಕೆಯಾಗಿವೆ.
ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿರುವ ಕಾರಣ, ಪಕ್ಷಗಳು ಪ್ರಚಾರಕ್ಕಾಗಿ ಫೇಸ್ಬುಕ್ ಜಾಹೀರಾತುಗಳ ಮೊರೆ ಹೋಗುತ್ತಿವೆ.