ಹಾಸನ: ಮಲೆನಾಡು ಭಾಗದಲ್ಲಿ ಹೆಚ್ಚಿರುವ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಬಜೆಟ್ನಲ್ಲಿ 200 ಕೋಟಿ ಮೀಸಲಿರಿಸಿರುವುದು ಕಾಡಾನೆ ಉಪಟಳದಿಂದ ನೊಂದಿರುವ ಜನರಲ್ಲಿ ತುಸು ಸಮಾಧಾನ ತರಿಸಿದೆ.
ಆಲೂರು ತಾಲೂಕಿನ ದೊಡ್ಡಬೆಟ್ಟ ಬಳಿ 9 ಕಿ.ಮೀ ಉದ್ದದ ರೈಲು ಹಳಿ ತಡೆಗೋಡೆ ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ ಇದಕ್ಕೆ ಇದೇ ವರ್ಷ ಚಾಲನೆ ನೀಡಲಾಗುತ್ತದೆ. 1 ಕಿ.ಮೀ ತಡೆಗೋಡೆಗೆ ಸುಮಾರು 1 ಕೋಟಿ ರೂ. ವ್ಯಯವಾಗಲಿದೆ. ಅಲ್ಲದೆ ಮುಂದಿನ 4 ವರ್ಷಗಳಲ್ಲಿ ಆನೆಗಳ ಉಪಟಳ ಇರುವೆಡೆ ಕ್ರಮ ಕೈಗೊಳ್ಳಲಾಗುತ್ತದೆ.
ಆಲೂರು, ಸಕಲೇಶಪುರ, ಯಸಳೂರು ಭಾಗದಲ್ಲಿ ಕಾಡಿನಿಂದ ನಾಡಿಗೆ ಬಂದು ದಾಂಧಲೆ ನಡೆಸುತ್ತಿರುವ ಆನೆಗಳಿಂದ ಜೀವ ಹಾನಿ, ಬೆಳೆ ಹಾನಿ ಸಂಭವಿಸದಂತೆ ಎಚ್ಚರ ವಹಿಸಲಾಗಿದೆ. ಸಮಸ್ಯೆಗೆ ತುರ್ತಾಗಿ ಸ್ಪಂದಿಸಲು ಜಿಲ್ಲೆಯಲ್ಲಿ ಒಟ್ಟು 26 ರ್‍ಯಾಪಿಡ್ ರೆಸ್ಪಾನ್ಸ್ ಟೀಂ ರಚಿಸಲಾಗಿದೆ. ಆರ್‌ಆರ್‌ಟಿ ತಂಡ ಇರುವ ಕಡೆ ಕ್ಯಾಂಪ್ ನಿರ್ಮಿಸಲಾಗಿದ್ದು, ಪ್ರತಿ ತಂಡದಲ್ಲಿ ತಲಾ ನಾಲ್ವರು ಸಿಬ್ಬಂದಿ 24x7 ಮಾದರಿಯಲ್ಲಿ ನಿಯೋಜಿಸಲ್ಪಟ್ಟ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಾರೆ.
ಆನೆ ಕಾರ್ಯಾಚರಣೆ ನಡೆಯುವಾಗ ಆರ್‌ಆರ್‌ಟಿ ಶೆಡ್ನಲ್ಲೇ ಸಾಕಾನೆಗಳೂ ತಂಗಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಹಂತ ಹಂತವಾಗಿ ಕಾಡಾನೆ ಸಮಸ್ಯೆ ಕಡಿಮೆಯಾಗಬಹುದು ಎಂಬುದು ಅರಣ್ಯ ಇಲಾಖೆ ಲೆಕ್ಕಾಚಾರ.
ಇದಲ್ಲದೆ, ಅರಣ್ಯ ಇಲಾಖೆಯಿಂದ ಜಿಯೋ ಟ್ರೇಸರ್ ಹೆಸರಿನ ಆ್ಯಪ್ ವ್ಯವಸ್ಥೆ ಮಾಡಲಾಗಿದ್ದು, ಆನೆ ಗಲಾಟೆ ಕಡಿಮೆಯಾಗಿದೆ. 2018ರ ಆ. 18 ರಂದು ಆನೆ ಮತ್ತು ಮಾನವ ಸಂಘರ್ಷಕ್ಕೆ ಜೀವ ಹಾನಿಯಾಗಿರುವುದನ್ನು ಬಿಟ್ಟರೆ ಮತ್ತೆ ಇಂತಹ ಘಟನೆ ಮರುಕಳಿಸಿಲ್ಲ. ಮಲೆನಾಡು ಭಾಗದಲ್ಲಿ 3 ರಿಂದ 4 ಸಾವಿರ ಜನರ ಮೊಬೈಲ್ ನಂಬರ್ ಸಂಗ್ರಹಿಸಿದ್ದು, ಕಾಡಾನೆ ಮಾಹಿತಿ ದೊರೆತ ತಕ್ಷಣ ಎಲ್ಲರಿಗೂ ಸಾಮೂಹಿಕವಾಗಿ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿದೆ. ಬೆಳಗ್ಗೆ ಮತ್ತು ಸಂಜೆ, ಜನರಿಗೆ ಆನೆಗಳು ಸಂಚರಿಸುವ ಸ್ಥಳದ ಬಗ್ಗೆ ಅಪ್ಡೇಟ್ ಮಾಡಲಾಗುತ್ತದೆ. ಸ್ಥಳೀಯರು, ಕಾಫಿ ಬೆಳೆಗಾರರು, ಜನ ಪ್ರತಿನಿಧಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ.
ಮಲೆನಾಡು ಭಾಗದಲ್ಲಿ 50 ಆನೆಗಳು...
ಸಕಲೇಶಪುರ-ಆಲೂರು ಭಾಗದಲ್ಲಿ 9 ಕಿಲೋ ಮೀಟರ್ ಉದ್ದ ರೈಲು ಹಳಿಯಿರುವಲ್ಲಿ ತಡೆಗೋಡೆ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು ತಿಳಿಸಿದ್ದಾರೆ.
ಅಂದಾಜಿನ ಪ್ರಕಾರ ಮಲೆನಾಡು ಭಾಗದಲ್ಲಿ 50 ಆನೆಗಳಿವೆ. ಈ ಪೈಕಿ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ. ಹೀಗಾಗಿ ಆನೆಗಳು ಓಡಾಡುವ ಸ್ಥಳವನ್ನು ಗುರುತಿಸಲು ಸಾಧ್ಯ. ಮಾಹಿತಿ ಸಿಕ್ಕ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎಚ್ಚರಿಕೆ ವಹಿಸುವಂತೆ ಜನರಿಗೆ ತಿಳುವಳಿಕೆ ಹೇಳುತ್ತಾರೆ ಎಂದು ಹೇಳಿದರು. ಆನೆ ಬಾಧಿತ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ದು ಮತ್ತು ಬಿಡಲು ಪ್ರತ್ಯೇಕ ವಾಹನ ವ್ಯವಸ್ಥೆ ಈ ಬಾರಿಯೂ ಮುಂದುವರಿಯಲಿದೆ ಎಂದರು.