ಬೆಂಗಳೂರು : ಸರ್ಕಾರದ ಸಾರ್ವಜನಿಕರ ಭೂಮಿ ಮತ್ತು ಕಟ್ಟಡಗಳ ಮಾರಾಟ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗಳು ತಕ್ಷಣವೇ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ಎಂಎಂಎಲ್ ಕಂಪನಿಗೆ ಜಿಂದಾಲ್ 1300 ಕೋಟಿ ರೂ. ನೀಡಬೇಕಾಗಿದೆ. ಅಲ್ಲಿನ ಪ್ರಾಧಿಕಾರಕ್ಕೆ ನೀಡಬೇಕಾದ ಹಣವನ್ನು ಪಾವತಿಸದೆ ರಾಜಕಾರಣಿಗಳ ಪ್ರಭಾವ ಬಳಸಿ ಅನೇಕ ಅಕ್ರಮಗಳನ್ನ ನಡೆಸುತ್ತಲೆ ಇದೆ.
ಜಿಂದಾಲ್ ಕಂಪನಿಯ ಅಕ್ರಮ ವ್ಯವಹಾರಗಳು ಮತ್ತು ಆರ್ಥಿಕ ಅಪರಾಧಗಳ ತನಿಖೆಯಿಂದ ಸದರಿ ಕಂಪನಿಯನ್ನು ಕಪ್ಪುಪಟ್ಟಿಯಲ್ಲಿರಿಸಲಾಗಿದೆ. ಇಂತಹ ಕಂಪನಿಯ ಜೊತೆ ಸರ್ಕಾರ ವ್ಯವಹಾರ ನಡೆಸುತ್ತಿರುವುದು ಸರಿಯಲ್ಲ. ಸರ್ಕಾರವು ನೀಡಿದ 3666 ಎಕರೆ ಜಮೀನನ್ನು ಶುದ್ಧ ಕ್ರಯಕ್ಕೆ ಒಂದು ಎಕರೆಗೆ 1.50 ಲಕ್ಷ ರೂ.ಗಳಂತೆ ಮಾರಾಟ ಮಾಡಲು ಹೊರಟಿರುವುದು ಖಂಡನೀಯ ಎಂದು ಆರೋಪಿಸಿದರು.
ಈ ಭೂಮಿ ರಸ್ತೆ ಪಕ್ಕದಲ್ಲೇ ಇರುವುದರಿಂದ ಒಂದು ಎಕರೆ ಕನಿಷ್ಠ 25 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಬೆಲೆ ಬಾಳುತ್ತದೆ. ಆದರೆ, ಕನಿಷ್ಠ ದರಕ್ಕೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ಧೋರಣೆಯನ್ನು ಖಂಡಿಸಬೇಕಾಗಿದೆ. ಸರ್ಕಾರ ಕೂಡಲೇ ಈ ವಹಿವಾಟನ್ನು ರದ್ದು ಮಾಡಬೇಕು. ಇಲ್ಲವಾದರೆ ರೈತ ಸಂಘಟನೆ, ದಲಿತ ಸಂಘಟನೆ, ಪ್ರಗತಿಪರ ಹೋರಾಟಗಾರರು ಜತೆಗೂಡಿ ಸರ್ಕಾರದ ವಿರುದ್ಧ ಧ್ವನಿ ಮೊಳಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೈತಿಕತೆ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷವು ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ ಎಂದು ವಿರೋಧ ಪಕ್ಷದವರ ವಿರುದ್ಧವೂ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.