ಬೆಂಗಳೂರು: ಇಂಧನ ಸಂಶೋಧನೆ ಕ್ಷೇತ್ರದಲ್ಲಿ ಪ್ರತಿಷ್ಠಿತ ಇನಿ ಪ್ರಶಸ್ತಿಗೆ ಭಾಜನರಾಗಿರುವ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ತಮ್ಮ ಸಂಶೋಧನೆಗೆ ಅಂತಾರಾಷ್ಟ್ರೀಯ ಪ್ರತಿಷ್ಠಿತ 'ಇನಿ' (ENI) ಪ್ರಶಸ್ತಿ ಲಭಿಸಿರುವುದು ಇಡೀ ಕರ್ನಾಟಕ ಹಾಗೂ ದೇಶದ ಪ್ರತಿಯೊಬ್ಬ ಪ್ರಜೆ ಹೆಮ್ಮೆ ಪಡುವ ವಿಚಾರ ಎಂದು ಅವರು ಹೇಳಿದ್ದಾರೆ.
ವಿಜ್ಞಾನ ಹಾಗೂ ಸಂಶೋಧನೆ ಕ್ಷೇತ್ರದ ಸುದೀರ್ಘ ಬದುಕಿನಲ್ಲಿ ಸಿಎನ್ಆರ್ ರಾವ್ ಅವರು ಈ ಜಗತ್ತಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂಧನ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಈ ಅತ್ಯುನ್ನತ ಗೌರವಕ್ಕೆ ತಾವು ಭಾಜನರಾಗಿರುವುದು ಸಂತೋಷದ ವಿಚಾರ. ಈ ಪ್ರಶಸ್ತಿ ಪಡೆದಿರುವ ಮೊದಲ ಭಾರತೀಯ ಹಾಗೂ ಏಷ್ಯಾ ಖಂಡದ ವಿಜ್ಞಾನಿ ತಾವಾಗಿದ್ದು, ಪ್ರತಿಯೊಬ್ಬ ಕನ್ನಡಿಗನಿಗೂ ನಿಮ್ಮ ಈ ಸಾಧನೆ ಸ್ಫೂರ್ತಿಯ ಸೆಲೆಯಾಗಲಿದೆ ಎಂದು ಶ್ಲಾಘಿಸಿದ್ದಾರೆ.
ಜಗತ್ತಿನ ಎಲ್ಲ ಯುವ ವಿಜ್ಞಾನಿಗಳಿಗೂ ಮಾದರಿ, ಪ್ರೇರಣೆಯಾಗಿ, ಕರ್ನಾಟಕ ಹಾಗೂ ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ತಮಗೆ ಈ ವಿಶೇಷ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲು ಹೆಮ್ಮೆಯೆನಿಸುತ್ತದೆ. ಮನತುಂಬಿ ಬರುತ್ತಿದೆ. ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ನಿಮ್ಮ ಸೇವೆ ಹೀಗೆಯೇ ನಿರಂತರವಾಗಿ ಸಾಗಿ ಇನ್ನಷ್ಟು ಹೊಸ ಸಂಶೋಧನೆಗಳು, ಗೌರವಗಳು ನಿಮ್ಮದಾಗಲಿ ಎಂದು ಶುಭ ಕೋರುತ್ತೇನೆ ಎಂದು ಸಿಎನ್ಆರ್ ರಾವ್ ಅವರಿಗೆ ಬರೆದಿರುವ ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.