ಗದಗ: ಮುಂಡರಗಿ ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯಿಂದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ನೇರವಾಗಿ ಸರಕಾರ ಮತ್ತು ಜಿಲ್ಲಾಡಳಿತ ಹೊಣೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು.
ಮುಂಡರಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಕೊರತೆಯಿಂದಾಗಿ ಸಾವು ಆಗಿದೆ. ಈ ಸಾವಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಜವಾಬ್ದಾರಿ ಹೊರಬೇಕು. ಈ ಸಾವಿನಿಂದ ಗದಗ ಜಿಲ್ಲೆಯ ಜನರಲ್ಲಿ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಪದೇ ಪದೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಕಳೆದ ಎರಡು ದಿನಗಳ ಗದಗ ಜಿಲ್ಲೆಯಲ್ಲಿ ಆಕ್ಸಿಜನ್ ಪರಿಸ್ಥಿತಿ ಉದ್ಭವಾಗಿತ್ತು, ಅದೇ ರೀತಿಯ ಆಕ್ಸಿಜನ್ ಆತಂಕ ಇವತ್ತು ಕೂಡಾ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ತಕ್ಷಣ ರಾಜ್ಯ ಸರ್ಕಾರ 20 ಕೆ ಎಲ್ ಆಕ್ಸಿಜನ್ ಟ್ಯಾಂಕ್ ನೀಡಬೇಕು, ರಾಜ್ಯ ಸರ್ಕಾರ ಇವತ್ತೇ 20 ಕೆಎಲ್ ಆಕ್ಸಿಜನ್ ಟ್ಯಾಂಕಿಗೆ ಆದೇಶ ಹೊರಡಿಸಬೇಕು.
ಗದಗ ಜಿಲ್ಲೆಯಲ್ಲಿ ಬೆಡ್ಗಾಗಿ ಹಾಹಾಕಾರ ಮುಂದುವರಿದಿದೆ. ಗದಗ ಜಿಲ್ಲೆಯ ಜಿಮ್ಸ್ ಸೇರಿದಂತೆ ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಗಂಭೀರವಾದ ಸ್ಥಿತಿಯಿಂದಾಗಿ ಒಂದು ಸಾವಿರ ಬೆಡ್ ತುರ್ತಾಗಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.