ವಿಜಯಪುರ: ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಕಂಟೇನ್ಮೆಂಟ್ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಅಲ್ಲಾಪೂರ ಬೇಸ್ ಹಾಗೂ ಪೈಲ್ವಾನ್‍ಗಲ್ಲಿ ಕಂಟೇನ್ಮೆಂಟ್ ವಲಯಗಳಿಗೆ ಭೇಟಿ ನೀಡಿದ ಡಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.
ಕೊರೊನಾ ಅಪಾಯಕಾರಿ ಮತ್ತು ಸಾಂಕ್ರಾಮಿಕ ರೋಗವಾಗಿದ್ದು, ಎಲ್ಲರೂ ಒಟ್ಟುಗೂಡಿ ಕಾರ್ಯ ನಿರ್ವಹಿಸುವ ಅಗತ್ಯವಿದೆ.ಈ ವಲಯಗಳಲ್ಲಿ ಪ್ರತಿ ಮನೆಗೆ ಆರೋಗ್ಯ ಸಮೀಕ್ಷೆಗಾಗಿ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿದ್ದು, ಅವರಿಗೆ ಸಹಕರಿಸುವಂತೆ ತಿಳಿಸಿದರು.
ಬಳಿಕ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ, ಮಾತನಾಡಿದ ಡಿಸಿ, ಜಿಲ್ಲೆಯ ಕಂಟೇನ್ಮೆಂಟ್ ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ಕೈಗೊಳ್ಳುತ್ತಿದ್ದು, ಇವರಿಗೆ ಸ್ವ ಸಹಾಯ ಗುಂಪುಗಳು ಮತ್ತು ಸಮುದಾಯ ಕಾರ್ಯಕರ್ತರು ಕೈಜೋಡಿಸಿ ಸೂಕ್ತ ಆರೋಗ್ಯ ಮಾಹಿತಿ ಸಂಗ್ರಹಿಸಬೇಕು ಎಂದರು.
ಈ ಕಂಟೇನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಲಾಗುವುದು. ಅವಶ್ಯಕ ಆಹಾರ ಕಿಟ್‍ಗಳನ್ನು ಪೂರೈಸಲಾಗುವುದು. ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಆಯುಕ್ತರು ಸೂಕ್ತ ಕ್ರಮ ವಹಿಸಲಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ತಪ್ಪು ಮಾಹಿತಿ ನೀಡದೇ ಆರೋಗ್ಯ ಸಮೀಕ್ಷಾ ತಂಡಗಳಿಗೆ ಅಧಿಕೃತ ಮಾಹಿತಿ ನೀಡಿ ಕೋವಿಡ್-19 ನಿಯಂತ್ರಣಕ್ಕೆ ನೆರವಾಗುವಂತೆ ಸಲಹೆ ನೀಡಿದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಕಂಟೇನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರು ಮನೆಗಳಿಂದ ಹೊರ ಬಂದು ತಿರುಗಾಡಬಾರದು. ಆರೋಗ್ಯ ಸಮೀಕ್ಷೆಗೆ ಸೇರುವ ತಂಡಗಳಿಗೆ ಅವಶ್ಯಕ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಯಾವುದೇ ರೀತಿಯ ತಪ್ಪು ಮಾಹಿತಿ ನೀಡುವುದಾಗಲಿ, ಅಸಹಕಾರ ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಈ ವೇಳೆ, ಡಿವೈಎಸ್‍ಪಿ ಗಳಾದ ಲಕ್ಷ್ಮಿನಾರಾಯಣ, ಗೋಲ್‍ಗುಂಬಜ್ ಡಿವೈಎಸ್‍ಪಿ ಸುಲ್ಫಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ. ಮುಕುಂದ ಗಲಗಲಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕವಿತಾ, ಪಿಎಸ್‍ಐ ರಾಜೇಶ ಚವ್ಹಾಣ, ಪೈಲ್ವಾನ್‍ಗಲ್ಲಿ ಜಮಾತ್ ಮುಖ್ಯಸ್ಥ ಮಹಬೂಬ್ ಪಾಷಾ ಹಕಿಂ, ಪೀಟರ್ ಅಲೆಕ್ಸಾಂಡರ್, ಡಾ. ಝೆನಂತ್, ಡಾ. ಗುಂದಬಾವಡಿ, ಡಾ. ಬಾಲಕೃಷ್ಣ, ಡಾ. ಸಂತೋಷ ಶಟ್ಟಿ ಹಾಗೂ ಇತರರು ಇದ್ದರು.