ಶಿವಮೊಗ್ಗ: ಕಳೆದ ಐದು ದಿನದಲ್ಲಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಮಲೆನಾಡು ಶಿವಮೊಗ್ಗದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಕೊರೊನಾ ಎರಡನೇ ಅಲೆಯಲ್ಲಿ ಒಟ್ಟು 569 ಜನ ಸಾವನ್ನಪ್ಪಿದ್ದಾರೆ.
ಜೂನ್ 10 ರಂದು 8 ಜನ ಸಾವನ್ನಪ್ಪಿದ್ದರೆ, ಜೂನ್11 ಕ್ಕೆ 7 ಜನ ಹಾಗೂ 12ರಂದು 6 ಜನ ಮೃತಪಟ್ಟಿದ್ದಾರೆ. 13ರಂದು ಐದು ಜನ ಹಾಗೂ 14ರಂದು ನಾಲ್ಕು ಜನ ಉಸಿರು ಚೆಲ್ಲಿದ್ದಾರೆ. ಕಳೆದೆರಡು ತಿಂಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಏಪ್ರಿಲ್ ತಿಂಗಳಲ್ಲಿ 31, ಮೇ ತಿಂಗಳಲ್ಲಿ 427 ಜನ ಅಂದರೆ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಹಾಗೇ ಇದೇ ತಿಂಗಳು ಜೂನ್ ನಲ್ಲಿ 111 ಜನ ಸಾವನ್ನಪ್ಪಿದ್ದಾರೆ. ಒಟ್ಟು ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 569ಕ್ಕೆ ಏರಿದೆ. ಹೀಗಾಗಿ ಮಲೆನಾಡಿನ ಜನರು ಭಯಬೀತರಾಗಿದ್ದರು.
ಆದರೆ ಕಳೆದ ಐದು ದಿನಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಒಟ್ಟು 349 ಜನ ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ ಒಟ್ಟು 569 ಸಾವನ್ನಪ್ಪಿದ್ದು, ಒಟ್ಟು 918 ಜನ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬೆಂಗಳೂರಿನಿಂದ ವಿಶೇಷ ಸಮಿತಿ ರಚಿಸಿ ವರದಿ ನೀಡುವಂತೆ ತಿಳಿಸುತ್ತೇನೆ ಎಂದು ಜೂನ್ 12ಕ್ಕೆ ಶಿವಮೊಗ್ಗಕ್ಕೆ ಬಂದಾಗ ತಿಳಿಸಿದ್ದಾರೆ.