ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕೈಮೀರಿದ್ದು, ಮಾರ್ಗಸೂಚಿ ಪಾಲಿಸುವಂತೆ ರಾಜ್ಯದ ಜನತೆಗೆ ಕರೆ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ನಿವಾಸದಲ್ಲಿ ಅಂತರ ಕಾಯ್ದುಕೊಳ್ಳುವ ಸಿಎಂ ಪ್ರವಾಸದಲ್ಲಿ ಎಲ್ಲವನ್ನೂ ಗಾಳಿಗೆ ತೂರುತ್ತಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ನಿಯಮ ರೂಪಿಸುವವರೇ ನಿಯಮ ಪಾಲಿಸದೇ ಇದ್ದರೆ ಜನರು ಹೇಗೆ ಪಾಲನೆ ಮಾಡುತ್ತಾರೆ ಎನ್ನುವ ಆಲೋಚನೆಯೂ ಮಾಡದೇ ಪದೇ ಪದೆ ಅಂತರ ಕಾಯ್ದುಕೊಳ್ಳುವಿಕೆಯ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ.
ಮೆಟ್ರೋ ಕಾಮಗಾರಿ ಪರಿಶೀಲನೆಗೆ ಇಂದು ವಿಧಾನಸೌಧದ ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಸಿಎಂ ಪ್ರಯಾಣ ಬೆಳೆಸಿದರು. ಈ ವೇಳೆ ನಿಲ್ದಾಣಕ್ಕೆ ಪ್ರವೇಶ ಮಾಡುವ ವೇಳೆಯಲ್ಲಿಯೇ ಭದ್ರತಾ ಸಿಬ್ಬಂದಿ, ಸಚಿವರು, ಅಧಿಕಾರಿಗಳು ಹಾಗೂ ಮೆಟ್ರೋ ಸಿಬ್ಬಂದಿ ಸಿಎಂ ಸುತ್ತ ಮುತ್ತಿಕೊಂಡಿದ್ದಾರೆ. ಇಡೀ ಮೆಟ್ರೋ ವೀಕ್ಷಣೆ ಸಮಯವೆಲ್ಲಾ ಇದೇ ರೀತಿಯಲ್ಲಿ ಜನಜಂಗುಳಿಯಲ್ಲೇ ಸಿಎಂ ಕಾಲ ಕಳೆದಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆಯುವ ವೇಳೆಯಲ್ಲಿಯೂ ಅಂತರ ಮರೆತು ಮಾತುಕತೆ ನಡೆಸಿದರು.
ಮೆಟ್ರೋ ನಿಲ್ದಾಣ, ಮೆಟ್ರೋ ರೈಲು ಹಾಗೂ ಕಾಮಗಾರಿ ವೀಕ್ಷಣೆ ಮೂರೂ ಕಡೆಯೂ ಅಂತರ ಕಾಯ್ದುಕೊಳ್ಳುವ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾಧ್ಯಮಗಳ ಕ್ಯಾಮೆರಾ ಇವೆ ಎನ್ನುವುದನ್ನೂ ಲೆಕ್ಕಿಸದೆ, ಕೊರೊನಾ ಸೋಂಕು ಮರೆತು ಸಾಮಾನ್ಯ ದಿನಗಳಲ್ಲಿನ ರೀತಿಯಂತೆಯೇ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿದ್ದರಾದರೂ ಅಂತರ ಕಾಯ್ದುಕೊಳ್ಳಬೇಕು ಎನ್ನುವುದನ್ನು ಅಲ್ಲಿರುವ ಎಲ್ಲರೂ ಮರೆತಿದ್ದು ಸ್ಪಷ್ಟವಾಗಿದೆ.
ನಿನ್ನೆಯೂ ಇದೇ ರೀತಿಯ ಘಟನೆ ನಡೆದಿತ್ತು. ದೊಮ್ಮಲೂರಿನಲ್ಲಿರುವ ಬಿಬಿಎಂಪಿ ಕಾಲ್ ಸೆಂಟರ್ ಗೆ ಭೇಟಿ ನೀಡಿ ಕಾಲ್ ಸೆಂಟರ್ ಕಾರ್ಯವೈಖರಿ ಬಗ್ಗೆ ಸಿಎಂ ಯಡಿಯೂರಪ್ಪ ಪರೀಶೀಲನೆ ನಡೆಸಿದ್ದರು. ಈ ವೇಳೆಯಲ್ಲಿಯೂ ಅಂತರ ಕಾಯ್ದುಕೊಳ್ಳುವ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಸಿಎಂ ಸುತ್ತಮುತ್ತ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಸುತ್ತುವರೆದಿತ್ತು. ಅಂತರ ಪಾಲನೆ ನಿಯವನ್ನು ಗಾಳಿಗೆ ತೂರಲಾಗಿತ್ತು ಎನ್ನುವುದನ್ನು ಸ್ಮರಿಸಬಹುದು.
ಮಾಧ್ಯಮಗಳ ಮುಂದೆ ಕೋವಿಡ್ ನಿಯಂತ್ರದ ಕುರಿತು ಮಾತನಾಡುವಾಗಲೆಲ್ಲಾ ನಾಡಿನ ಜನತೆಯ ಸಹಕಾರ ಕೋರುವ ಸಿಎಂ ಮಾಸ್ಕ್, ಧರಿಸಿ, ಅಂತರ ಕಾಯ್ದುಕೊಳ್ಳಿ, ಗುಂಪು ಸೇರಬೇಡಿ ಎಂದು ಕರೆ ನೀಡುತ್ತಾರೆ, ಇದರ ನಿಯಮವನ್ನೇ ರೂಪಿಸಿ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೂ ಆದೇಶಿಸಿದ್ದಾರೆ. ಆದರೆ, ಅದೇ ನಿಯಮವನ್ನು ರೂಪಿಸಿರುವ ನಾಡಿನ ದೊರೆಗೆ ಮಾತ್ರ ಇದು ಅನ್ವಯವಾಗುವುದಿಲ್ಲವೇ? ಅಂತರ ಕಾಯ್ದುಕೊಳ್ಳುವ ನಿಯಮ ಕೇವಲ ಜನರಿಗೆ ಮಾತ್ರವೇ, ಆಳುವವರಿಗೆ, ಅಧಿಕಾರಿಗಳಿಗೆ ಇದು ಅನ್ವಯವಾಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಜನರಿಗೆ ನಿಯಮ ಪಾಲಿಸಿ ಎನ್ನುವ ಆಳುವ ವರ್ಗ ಮೊದಲು ಸ್ವತಃ ತಾವು ನಿಯಮ ಪಾಲಿಸಿ ಮಾದರಿಯಾಗಬೇಕು. ಆದರೆ, ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಆಗುತ್ತಿದೆ. ನಿಯಮ ನಮಗಲ್ಲಾ ಎನ್ನುವ ಧೋರಣೆ ಎದ್ದು ಕಾಣುತ್ತಿದೆ, ಇನ್ನಾದರೂ ಸಿಎಂ ಯಡಿಯೂರಪ್ಪ ಸೇರಿದಂತೆ ಆಳುವ ವರ್ಗ ಕೊರೊನಾ ನಿಯಮ ಪಾಲಿಸಿ ಜನರಿಗೆ ಮಾದರಿಯಾಗುವಂತಾಗಬೇಕಿದೆ.