ನವದೆಹಲಿ: ಸುಮಾರು ಒಂದು ವರ್ಷದಿಂದಲೂ ಭಾರತ ಹಾಗೂ ಚೀನಾ ಮಿಲಿಟರಿ ನಡುವೆ ವಿವಾದ ಏರ್ಪಟ್ಟಿದೆ. ಹೀಗಿರುವಾಗಲೇ ಚೀನಾದ ವಾಯುಪಡೆ ಇತ್ತೀಚಿಗೆ ಪೂರ್ವ ಲಡಾಖ್ನಲ್ಲಿ ದೊಡ್ಡ ವೈಮಾನಿಕ ಪ್ರದರ್ಶನ ನಡೆಸಿದ್ದು, ಇದನ್ನು ಭಾರತೀಯ ಸೇನೆ ಹತ್ತಿರದಿಂದ ವೀಕ್ಷಿಸಿದೆ ಎಂದು ಮೂಲಗಳು ತಿಳಿಸಿದೆ.
ಜೆ-11ಎಸ್ ಮತ್ತು ಕೆಲವು ಜೆ-16 ಯುದ್ಧ ವಿಮಾನಗಳು ಸೇರಿದಂತೆ ಸುಮಾರು 21 ರಿಂದ 22 ಚೀನಾದ ಯುದ್ಧ ವಿಮಾನಗಳು ಪೂರ್ವ ಲಡಾಖ್ನಲ್ಲಿ ಭಾರತದ ಗಡಿಯ ಎದುರಿಗೆ ಪ್ರದರ್ಶನ ನಡೆಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ.
ಎಲ್ಲಾ ವಿಧದ ಯುದ್ಧದ ಕಾರ್ಯಾಚರಣೆಗೆ ಸಮರ್ಥ ರೀತಿಯಲ್ಲಿ ಆಧುನೀಕರಿಸಿರುವ ಹೊಟಾನ್, ಗರ್ ಗುನ್ಸಾ ಮತ್ತು ಕಾಸ್ಗರ್ ವಾಯುನೆಲೆ ಸೇರಿದಂತೆ ತನ್ನ ವಾಯುನೆಲೆಗಳಲ್ಲಿ ಚೀನಾದ ಯುದ್ಧ ವಿಮಾನಗಳು ಚಟುವಟಿಕೆ ಕೈಗೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಲಡಾಖ್ನಲ್ಲಿ ಕಳೆದ ವರ್ಷದಿಂದಲೂ ಭಾರತೀಯ ಯುದ್ಧ ವಿಮಾನಗಳ ಚಟುವಟಿಕೆಯೂ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿದೆ. ಪಾಂಗೊಂಗ್ ಲೇಕ್ ಪ್ರದೇಶದಿಂದ ತನ್ನ ಸೇನೆಯನ್ನು ಚೀನಾ ಹಿಂತೆಗೆದುಕೊಂಡಿದ್ದರೂ, ವಿಮಾನಗಳನ್ನು ದೀರ್ಘ ವ್ಯಾಪ್ತಿಯವರೆಗೂ ಗುರಿಯಾಗಿಸಬಲ್ಲ HQ-9 ಮತ್ತು HQ-16 ಸೇರಿದಂತೆ ವಾಯು ರಕ್ಷಣಾ ವ್ಯವಸ್ಥೆಯನ್ನು ಅವರು ಹಿಂಪಡೆದಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ.
ಕ್ಸಿ ಜಿಯಾಂಗ್ ಮತ್ತು ಟಿಬೆಟ್ ಪ್ರದೇಶದ ಪಂಗಟ್ ಮತ್ತು ಹೂಟನ್, ಗರ್ ಗುನ್ಸಾ, ಕಾಸ್ಘರ್, ಹೊಪ್ಪಿಂಗ್, ಡಿಜಾಂಗ್, ಲಿಂಝಿ ವಾಯುನೆಲೆ ಸೇರಿದಂತೆ ಚೀನಾದ ವಾಯುಪಡೆಯ ಚಟುವಟಿಕೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ.