ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಜನರು ಕೋವಿಡ್ ಲಸಿಕೆ ಪಡೆಯಲು ಬಾರದೇ ಇರುವುದು ಬಿಬಿಎಂಪಿಗೆ ಹೊಸ ತಲೆನೋವಾಗಿದೆ.
ಶಿವಾಜಿನಗರ, ಡಿ.ಜೆ ಹಳ್ಳಿ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ. ಅಲ್ಲದೆ ವ್ಯಾಕ್ಸಿನ್ ಪಡೆದ ಪೌರಕಾರ್ಮಿಕರ ಪ್ರಮಾಣವೂ ಬಹಳಷ್ಟು ಕಡಿಮೆ ಇದೆ. ಈ ರೀತಿಯ ವರ್ಗದ ಜನರನ್ನು ವ್ಯಾಕ್ಸಿನ್ ಹಾಕಿಸಿಕೊಳ್ಳಲು, ಬೇರೆ ದಾರಿಯಿಲ್ಲದೆ ಉಡುಗೊರೆ ರೂಪದಲ್ಲಿ ರೇಷನ್ ಕಿಟ್ ಕೊಟ್ಟು, ವ್ಯಾಕ್ಸಿನ್ ಪಡೆಯುವಂತೆ ಮಾಡಲು ಪಾಲಿಕೆ ಮುಂದಾಗಿದೆ.
ನಗರದ ಇಸ್ಕಾನ್ ದೇವಸ್ಥಾನ 500, 750 ರುಪಾಯಿ ಮೌಲ್ಯದ ಫುಡ್ ಕಿಟ್ ಅನ್ನು 500 ಕ್ಕಿಂತಲೂ ಹೆಚ್ಚು ಜನರಿಗೆ ಕೊಡಲು ಮುಂದಾಗಿದೆ. ವ್ಯಾಕ್ಸಿನ್ ಪಡೆಯುವಂತೆ ಒತ್ತಾಯಿಸಲು, ಕಡ್ಡಾಯ ಮಾಡಲು ಸಾಧ್ಯವಿಲ್ಲದ ಕಾರಣ ಈ ರೀತಿ ಉಡುಗೊರೆಯ ಮೂಲಕ ಆಕರ್ಷಿಸಲು ಪಾಲಿಕೆ ಮುಂದಾಗಿದೆ.
ನಗರದಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ಪೌರಕಾರ್ಮಿಕರಿದ್ದು, ವ್ಯಾಕ್ಸಿನ್ ಕೇವಲ ನಾಲ್ಕು ಸಾವಿರ ಮಂದಿ ಪಡೆದಿದ್ದಾರೆ. ವ್ಯಾಕ್ಸಿನ್ ಪಡೆದ ವ್ಯಕ್ತಿಯೊಬ್ಬರು ಅನ್ಯಕಾರಣಗಳಿಂದ ತೀರಿಹೋದ ಪರಿಣಾಮ, ಭಯಬಿದ್ದಿರುವ ಪೌರಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಜೊತೆಗೆ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆಗಳಲ್ಲಿಯೂ ವ್ಯಾಕ್ಸಿನ್ ಪಡೆಯಲು ಇಚ್ಛಿಸುತ್ತಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಿ.ರಂದೀಪ್ ವಿವರಿಸಿದರು.