ಸುರಪುರ: ಇಲ್ಲಿನ ಕೆಂಭಾವಿ ಪಟ್ಟಣದ ರೈತ ಶ್ರೀಶೈಲ ಮಾಗಣಗೇರಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ ಶನಿವಾರ ಸುರಿದ ಮಳೆ ಗಾಳಿಗೆ ಸಂಪೂರ್ಣವಾಗಿ ಹಾಳಾಗಿದ್ದು ರೈತ ಕಣ್ಣೀರು ಹಾಕುವಂತಾಗಿದೆ.
ಕೆಂಭಾವಿ ತಾಳಿಕೋಟಿ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಸುಮಾರು 5000 ಬಾಳೆ ಗಿಡಗಳನ್ನು ಬೆಳೆಸಲು ಸುಮಾರು 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು.
ಆದರೆ, ಶನಿವಾರ ಸುರಿದ ಬಿರುಗಾಳಿ ಮಳೆಯಿಂದಾಗಿ ಸುಮಾರು 15 ಲಕ್ಷ ರೂಪಾಯಿಗಳ ಫಸಲು ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಬಿಜೆಪಿ ಮುಖಂಡ ಅಮೀನ್ ರೆಡ್ಡಿ ಯಾಳಗಿ ಹಾಗೂ ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಜನರು ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.
"ಸಾಲ ಮಾಡಿ ಬಾಳೆ ಬೆಳೆದ ರೈತ ಈಗ ಗೋಳು ತೋಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟದಲ್ಲಿರುವ ರೈತ ಶ್ರೀಶೈಲ ಮಾಗಣಗೇರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು."-ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ