ಕಾರವಾರ: ಮೀನುಗಾರರಿಗೆ ಘೋಷಣೆ ಮಾಡಿರುವ ಲಾಕ್ಡೌನ್ ಪರಿಹಾರ ಇನ್ನು ಸರಿಯಾಗಿ ಆಗಿಲ್ಲ. ಈ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತಿರುವುದಾಗಿ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್ ಅಂಗಾರ ಹೇಳಿದರು.
ಮೀನುಗಾರರು ಲಕ್ಷಾಂತರ ಮಂದಿ ಇದ್ದರೂ ಕೂಡ ಕೇವಲ 18 ಸಾವಿರ ಮಂದಿಗೆ ಮಾತ್ರ 3 ಸಾವಿರ ಪರಿಹಾರ ಘೊಷಣೆ ಮಾಡಿದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಮೀನುಗಾರರಿಗೆ ಪರಿಹಾರ ಇನ್ನು ಸರಿಯಾಗಿ ಆಗಿಲ್ಲ. ಪರಿಹಾರ ವಿತರಣೆ ಬಗ್ಗೆ ರೂಪುರೇಷೆ ಸಿದ್ದವಾಗಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇನ್ನು ಮೀನುಗಾರರ ಉಳಿತಾಯ ಪರಿಹಾರ ಯೋಜನೆ ಹಣ ಸರ್ಕಾರದಿಂದ ಬಿಡುಗಡೆಯಾಗದ ಕಾರಣ ಕರಾವಳಿಯಲ್ಲಿ ಮೂರು ವರ್ಷದಿಂದ ಮೀನುಗಾರರಿಗೆ ಸೌಲಭ್ಯ ಲಭಿಸದ್ದನ್ನು ಪ್ರಶ್ನಿಸಿದಾಗ ಈ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಡಿಸೇಲ್, ಸೀಮೆಎಣ್ಣೆ ಸಬ್ಸಿಡಿ ಸಿಗದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೆಚ್ಚುವರಿ ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ ಎಂದರು.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರ ಮಾತನಾಡಿದ ಅವರು, ನಾವೆಲ್ಲರೂ ಒಂದು ವಿಚಾರದಲ್ಲಿ ಬೆಳೆದು ಬಂದವರು. ನಮಗೆ ನಾಯಕತ್ವದ ಪ್ರಶ್ನೆ ಬರೋದಿಲ್ಲ. ನಾವು ಯಾರ ನಾಯಕತ್ವದಲ್ಲಿ ಬೇಕಾದರೂ ಇರಲು ಸಿದ್ದರಿದ್ದೇವೆ. ಯಡಿಯೂರಪ್ಪ ಅವರನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಅವರು ಹೇಳಿದರು.