ಸುಬ್ರಹ್ಮಣ್ಯ(ದ.ಕ): ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಛತ್ರಪ್ಪಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಬಂದೂಕು ತಯಾರಿಕಾ ಘಟಕದ ಪ್ರಕರಣ ಮತ್ತು ಆರೋಪಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಸ್‌ಡಿಪಿಐ ಸುಳ್ಯ ಘಟಕ ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿದ ಸುಳ್ಯ ಎಸ್ಡಿಪಿಐ ಅಧ್ಯಕ್ಷರಾದ ಅಬ್ದುಲ್ ಕಲಾಂ ಅವರು, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಅಕ್ರಮ ಕೋವಿ ತಯಾರಿಕಾ ಘಟಕದ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಕೆಲವರು ಈ ಪ್ರದೇಶದ ಆಸುಪಾಸಿನಲ್ಲಿ ತರಬೇತಿ ಪಡೆದಿದ್ದಾರೆ ಎನ್ನುವ ಆರೋಪ ಈಗಾಗಲೇ ಇದೆ.
ಮಾತ್ರವಲ್ಲದೆ ಗೋವಾ ಸ್ಪೋಟದ ಆರೋಪಿ ಸದ್ಯ ಭೂಗತವಾಗಿರುವ ಜಯಪ್ರಕಾಶ್ ಎಂಬವರು ಈ ಪ್ರದೇಶಕ್ಕೆ ಸಮೀಪದ ಕಡಬ ಪ್ರದೇಶದವನಾಗಿದ್ದಾನೆ. ಮತ್ತು ಸುಳ್ಯ ಸಮೀಪದ ಈಶ್ವರಮಂಗಲದಲ್ಲೂ ಸಜೀವ ಬಾಂಬ್ ಸಹಿತ ವ್ಯಕ್ತಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ಈ ಎಲ್ಲಾ ಪ್ರಕರಣಗಳಿಗೂ ಪರಸ್ಪರ ಸಂಬಂಧ ಇರುವ ತರಹ ಕಂಡು ಬರುತ್ತಿದೆ. ಆದುದರಿಂದ ಸಂಬಂಧಿಸಿದ ತನಿಖಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಡಿಪಿಐ ಅಧ್ಯಕ್ಷ ಅತ್ತಾವುಲ್ಲ ಜೋಕಟ್ಟೆ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಆಯಾ ಪ್ರದೇಶದ ಎಸ್ಡಿಪಿಐ ಕಾರ್ಯಕರ್ತರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಸುಳ್ಯ ವೃತ್ತ ನಿರೀಕ್ಷಕರಿಗೆ,ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.