ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 13 ವರ್ಷದ ಬಾಲಕಿ ಮತ್ತು ಆರು ಮಂದಿ ವಿಮಾನಯಾನ ಸಿಬ್ಬಂದಿ ಸೇರಿದಂತೆ 24 ಮಂದಿಗೆ ಕೊರೊನಾ ದೃಢಪಟ್ಟಿದೆ.
ಆರು ಮಂದಿ ವಿಮಾನಯಾನ ಸಿಬ್ಬಂದಿಯು ಜೂನ್ 3ರಂದು ದುಬೈನಿಂದ ಕೇರಳದ ಕಣ್ಣೂರಿಗೆ ಆಗಮಿಸಿ ನಂತರ ಮಂಗಳೂರಿಗೆ ಬಂದಿದ್ದರು. ಇವರನ್ನು ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇವರಿಗೆ ಇಂದು ಕೊರೊನಾ ದೃಢಪಟ್ಟಿದೆ.
13 ವರ್ಷದ ಬಾಲಕಿ ಸೇರಿದಂತೆ 11 ಮಂದಿ ಮಹಾರಾಷ್ಟ್ರದಿಂದ ಬಂದವರಿಗೆ ಕೊರೊನಾ ದೃಢಪಟ್ಟರೆ, 8 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಉಳಿದ 5 ಮಂದಿಗೆ ಯಾವ ಮೂಲದಿಂದ ಕೊರೊನಾ ಬಂತು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಇದರಲ್ಲಿ ಓರ್ವ ಎನ್ಎಂಪಿಟಿ ಬಂದರಿನಲ್ಲಿ ಹಡಗುಯಾನ ಸಿಬ್ಬಂದಿಯಾಗಿದ್ದಾರೆ. 24 ಮಂದಿಯಲ್ಲಿ 7 ಮಂದಿ ಮಹಿಳೆಯರಾಗಿದ್ದು, 17 ಮಂದಿ ಪುರುಷರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 175 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 88 ಮಂದಿ ಗುಣಮುಖರಾಗಿದ್ದಾರೆ. 7 ಮಂದಿ ಸಾವನ್ನಪ್ಪಿದ್ದು, 80 ಮಂದಿ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.