ನವದೆಹಲಿ: ಬೇಸಿಗೆಯ ಉರಿ ಬಿಸಿಲಿನಲ್ಲಿ ಈಗಾಗಲೇ ಸಾಕಷ್ಟು ಬೆಂದು ಹೋಗಿರುವ ದೇಶದ ಜನತೆಗೆ ಖಾಸಗಿ ಹವಾಮಾನ ಪರಿವೀಕ್ಷಣಾ ಸಂಸ್ಥೆ ಸ್ಕೈಮೆಟ್ ಮುಂಗಾರು ಪೂರ್ವ ಮಳೆಯ ಪ್ರಮಾಣದ ಬಗ್ಗೆ ಮಾಹಿತಿಯೊಂದನ್ನು ನೀಡಿದೆ.
ಈ ಬಾರಿ ಮುಂಗಾರು ಪೂರ್ವ ಮಳೆಯ ಪ್ರಮಾಣ ಕಳೆದ 65 ವರ್ಷಗಳಲ್ಲೇ ಎರಡನೇ ಕನಿಷ್ಠ ಎಂದು ಎಂದು ಸ್ಕೈಮೆಟ್ ತನ್ನ ವರದಿಯಲ್ಲಿ ಹೇಳಿದೆ. ತಾಪಮಾನದ ತೀವ್ರ ಹೆಚ್ಚಳಕ್ಕೆ ಮಳೆಯ ಪ್ರಮಾಣದಲ್ಲಾದ ಇಳಿಕೆ ಎನ್ನುವುದಾಗಿ ಸ್ಕೈಮೆಟ್ ತಿಳಿಸಿದೆ.
ಬೆಂಕಿಯುಂಡೆ ಭಾರತ! ಗರಿಷ್ಠ ತಾಪಮಾನ.. ವಿಶ್ವದ 15 ನಗರಗಳಲ್ಲಿ ಇಂಡಿಯಾದ್ದೇ ಸಿಂಹಪಾಲು..
ವಾಯವ್ಯ ಭಾರತದಲ್ಲಿ ಶೇ.30, ಮಧ್ಯ ಭಾರತದಲ್ಲಿ ಶೇ.18, ಪೂರ್ವ ಭಾರತದಲ್ಲಿ ಶೇ.14 ಹಾಗೂ ಈಶಾನ್ಯ ಭಾರತದಲ್ಲಿ ಶೇ. 47ರಷ್ಟು ಮುಂಗಾರು ಪೂರ್ವ ಮಳೆ ಸುರಿದಿದೆ ಎಂದು ಸ್ಕೈಮೆಟ್ ಮಾಹಿತಿ ನೀಡಿದೆ. ಮುಂಗಾರು ಪೂರ್ವ ಮಳೆಯ ಪ್ರಮಾಣ ಇಳಿಕೆಗೆ ಎಲ್ ನಿನೋ ಕಾರಣವಾಗಿದೆ ಎಂದು ಸ್ಕೈಮೆಟ್ ವರದಿಯಲ್ಲಿ ಉಲ್ಲೇಖಿಸಿದೆ. ಹವಾಮಾನದ ಸರಣಿ ಬದಲಾವಣೆಯಿಂದ ಫೆಸಿಫಿಕ್ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗಾಳಿಯ ತೀವ್ರತೆಯಲ್ಲಿ ಬದಲಾವಣೆ, ಬರ ಜೊತೆಗೆ ಕೆಲವೆಡೆ ತೀವ್ರ ಮಳೆಯೂ ಉಂಟಾಗುತ್ತದೆ. ಇದನ್ನು ಎಲ್ ನಿನೋ ಎಂಬುದಾಗಿ ಕರೆಯಲಾಗುತ್ತದೆ. ಹವಾಮಾನ ಇಲಾಖೆಯ ಖಚಿತ ಮಾಹಿತಿಯ ಪ್ರಕಾರ ಜೂನ್ 6ರಂದು ಕೇರಳ ಮೂಲಕವಾಗಿ ಮುಂಗಾರು ಕರ್ನಾಟಕವನ್ನು ಪ್ರವೇಶಿಸಲಿದೆ.