ಜೋಧಪುರ (ರಾಜಸ್ಥಾನ): ರಾಜಸ್ಥಾನದ ಜೋಧಪುರದಲ್ಲಿ ಸೇನಾಧಿಕಾರಿಯ ಸೋಗು ಹಾಕಿದ್ದ ಯುವಕನೋರ್ವನನ್ನು ಸೇನಾ ಗುಪ್ತಚರ ಸಿಬ್ಬಂದಿ ಬಂಧಿಸಿದ್ದಾರೆ. ಸೇನಾ ಕ್ಯಾಪ್ಟನ್ ಸಮವಸ್ತ್ರದಲ್ಲಿ ಇರುವಾಗಲೇ ಈ ವಂಚಕನನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರವಿಕುಮಾರ್ ಎಂಬಾತನೇ ಬಂಧಿತ ನಕಲಿ ಸೇನಾಧಿಕಾರಿ. ಸೇನಾ ಸಮವಸ್ತ್ರದಲ್ಲಿ ಸಲಾಸರ್ ಎಕ್ಸ್ಪ್ರೆಸ್ನಲ್ಲಿ ಶಂಕಿತ ಯುವಕರು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಸೇನೆಯ ಗುಪ್ತಚರ ವಿಭಾಗಕ್ಕೆ ಸಿಕ್ಕಿತ್ತು. ಅಂತೆಯೇ, ಜೋಧಪುರದ ರೈಕಾಬಾಗ್ ರೈಲ್ವೆ ನಿಲ್ದಾಣದಲ್ಲಿ ಇಳಿದ ಸೇನಾ ಕ್ಯಾಪ್ಟನ್ ಸಮವಸ್ತ್ರದಲ್ಲಿದ್ದ ಆರೋಪಿಯನ್ನು ಗುಪ್ತಚರ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆಗೆ ಒಳಪಡಿಸಿ ಗುರುವಾರ ರಾತ್ರಿ ಉದಯ್ ಮಂದಿರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಮ್ಮಿ ಗನ್ - ನಕಲಿ ಐಡಿ ಕಾರ್ಡ್ ಪತ್ತೆ: ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಾಗ ವಿಚಾರಣೆಗೆ ಆರೋಪಿಯು ಖೇತ್ರಿ ನಿವಾಸಿ ರವಿಕುಮಾರ್ ಎಂದು ತನ್ನ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಈ ವೇಳೆ ತಾನು ಜಾಟ್ ಬೆಟಾಲಿಯನ್ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದ. ಅಲ್ಲದೇ, ಗುರುತಿನ ಚೀಟಿಯನ್ನೂ ತೋರಿಸಿದ್ದಾನೆ. ಆದರೆ, ತನಿಖೆ ವೇಳೆ ಅದು ನಕಲಿ ಎಂದು ಖಚಿತವಾಗಿದೆ.
ಇದನ್ನೂ ಓದಿ: Fake ADGP: ಕ್ರಿಕೆಟಿಗ ರಿಷಬ್ ಪಂತ್, ಟ್ರಾವೆಲ್ ಏಜೆಂಟ್ಗೆ ವಂಚನೆ: ನಕಲಿ ಎಡಿಜಿಪಿ ಅರೆಸ್ಟ್
ಮುಂದುವರೆದು, ಆತನನ್ನು ತಪಾಸಣೆಗೆ ಒಳಪಡಿಸಿದಾಗ ಇನ್ಸಾಸ್ ರೈಫಲ್, ಡಮ್ಮಿ ಗನ್, ಎರಡು ಮೊಬೈಲ್ ಫೋನ್‌ಗಳು, ಮೂರು ಸಿಮ್ಸ್ ಪತ್ತೆಯಾಗಿದ್ದು, ಹೆಚ್ಚುವರಿಯಾಗಿ ಬಳಕೆ ಮಾಡುತ್ತಿದ್ದ ಐದು ಸಂಖ್ಯೆಗಳು ಸಹ ಪತ್ತೆಯಾಗಿವೆ. ಜೊತೆಗೆ ಫೋನ್‌ನಲ್ಲಿ ಏಳು ಇಮೇಲ್ ಐಡಿಗಳು ಮತ್ತು ಎರಡು ಇನ್‌ಸ್ಟಾಗ್ರಾಮ್ ಖಾತೆಗಳ ಮಾಹಿತಿ ದೊರತಿದೆ.
ಯುವತಿಯರಿಗೆ ಕೆಲಸ ಕೊಡಿಸುವ ಆಮಿಷ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಈ ನಕಲಿ ಸೇನಾಧಿಕಾರಿ, ಜಾಟ್ ಬೆಟಾಲಿಯನ್ ಕ್ಯಾಪ್ಟನ್ ಎಂದೇ ಹೇಳಿಕೊಳ್ಳುತ್ತಿದ್ದ. ಅಲ್ಲದೇ, ಸೇನೆಯಲ್ಲಿ ಯುವತಿಯರಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ ಎಂಬುದು ಗೊತ್ತಾಗಿದೆ. ಇದಕ್ಕಾಗಿ ಯಾರಿಂದಲಾದರೂ ಹಣ ಪಡೆದಿದ್ದಾನಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Fake NIA officer: ಗುಜರಾತ್‌ನಲ್ಲಿ ಎನ್‌ಐಎ ಅಧಿಕಾರಿಯಂತೆ ಸೋಗು ಹಾಕಿದ್ದ ವ್ಯಕ್ತಿ ಪೊಲೀಸ್ ಬಲೆಗೆ
ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಯಂತೆ ಸೋಗು ಹಾಕಿದ್ದ ವ್ಯಕ್ತಿಯೋರ್ವ ಪೊಲೀಸ್ ಬಲೆಗೆ ಬಿದ್ದಿದ್ದ. ಅಮ್ರೇಲಿ ಜಿಲ್ಲೆಯ ನಿವಾಸಿ ಗುಂಜಾನ್ ಹಿರೇನ್‌ಭಾಯ್ ಎನ್‌ಐಎ ಅಧಿಕಾರಿ ಎಂದು ಹೇಳಿಕೊಂಡಿದ್ದ ಎಟಿಎಸ್ ಕಚೇರಿಗೆ ತೆರಳಿದ್ದ. ಈ ವೇಳೆ ಅನುಮಾನಗೊಂಡು ಅಧಿಕಾರಿಗಳು ಹಿಡಿದಿದ್ದರು. ಬಂಧಿತ ಗುಂಜಾನ್ ಹಿರೇನ್‌ಭಾಯ್ ಬಳಿ ಮೂರು ವಿವಿಧ ಸರ್ಕಾರಿ ಇಲಾಖೆಗಳ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು.