ಇಂದೋರ್(ಮಧ್ಯಪ್ರದೇಶ) : ಇಂದೋರ್ನಲ್ಲಿ ವ್ಯಕ್ತಿಯೋರ್ವ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಸಮವಸ್ತ್ರದಲ್ಲಿದ್ದ ಪೊಲೀಸ್ ಪೇದೆ ಮೇಲೆ ಲಾಠಿಯಿಂದಲೇ ಹಲ್ಲೆ ನಡೆಸಲಾಗಿದ್ದು, ಮಧ್ಯಪ್ರದೇಶದ ಇಂದೋರ್ನ ವೆಂಕಟೇಶ್ನಗರದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಆರೋಪಿಯನ್ನ ದಿನೇಶ್(25) ಎಂದು ಗುರುತಿಸಲಾಗಿದೆ. ಈಗಾಗಲೇ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾವ ಕಾರಣಕ್ಕಾಗಿ ಹಲ್ಲೆ? : ಶುಕ್ರವಾರ ಮಧ್ಯಾಹ್ನ ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನೇಶ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಕಾನ್ಸ್ಟೇಬಲ್ ಜೈಪ್ರಕಾಶ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಆಗ ಎಚ್ಚರಿಕೆಯಿಂದ ಬೈಕ್ ಚಲಾಯಿಸಿಕೊಂಡು ಹೋಗುವಂತೆ ಕಾನ್ಸ್ಟೇಬಲ್ ಬುದ್ದಿವಾದ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ದಿನೇಶ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ವಿಚಿತ್ರ ಪ್ರಕರಣ : ಪುಣೆಯಲ್ಲಿ ಬೆಕ್ಕಿನ ಕೊಲೆ ; ಮಹಿಳೆ ವಿರುದ್ಧ ದಾಖಲಾಯ್ತು ಕೇಸ್!
ಸಾರ್ವಜನಿಕ ಸ್ಥಳದಲ್ಲೇ ಪೊಲೀಸ್ ಪೇದೆ ಮೇಲೆ ಲಾಠಿಯಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಯಾವುದೇ ವ್ಯಕ್ತಿ ಸಹಾಯಕ್ಕೆ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಜೈಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ಸಹಾಯಕ ಉಪ ಪೊಲೀಸ್ ಆಯುಕ್ತ ರಾಜೀವ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ. ಘಟನೆಯ ದೃಶ್ಯ ಆಧರಿಸಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಸೇರಿದಂತೆ ವಿವಿಧ ಪ್ರಕರಣದಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.