ಚಂಡೀಗಢ(ಪಂಜಾಬ್): ಕಾಂಗ್ರೆಸ್‌ನೊಂದಿಗಿನ ಬಹುಕಾಲದ ಒಡನಾಟ ತೊರೆದು ಬಂದಿರುವ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇದೀಗ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಚಂಡೀಗಢದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಆಯೋಗದಿಂದ ಅನುಮತಿ ಸಿಗುತ್ತಿದ್ದಂತೆ ಪಕ್ಷದ ಹೆಸರು ಘೋಷಿಸುತ್ತೇವೆ. ಈ ಸಂಬಂಧ ನಮ್ಮ ವಕೀಲರು ಕೆಲಸ ಮಾಡುತ್ತಿದ್ದಾರೆ ಎಂದರು.
ಸಮಯ ಬಂದರೆ ರಾಜ್ಯದ 117 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಇಲ್ಲವೇ ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಥವಾ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನವಜೋತ್ ಸಿಂಗ್ ಸಿಧು ಅವರೇ ನಮ್ಮ ಎದುರಾಳಿಯಾಗಿದ್ದು, ಅವರು ಎಲ್ಲೇ ನಿಂತರೂ ಅವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದರು.
ಇದೇ ವೇಳೆ ತಮ್ಮ ರಾಜಕೀಯ ಜೀವನದಲ್ಲಿನ ಸಾಧನೆಗಳನ್ನು ಹಂಚಿಕೊಂಡು, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಸಿಂಗ್, ನಾನು 9.5 ವರ್ಷಗಳ ಕಾಲ ಪಂಜಾಬ್ ಗೃಹ ಸಚಿವನಾಗಿದ್ದೆ. ಕೇವಲ 1 ತಿಂಗಳು ಗೃಹ ಸಚಿವರಾಗಿದ್ದವರು ನನಗಿಂತ ಹೆಚ್ಚು ತಿಳಿದವರಂತೆ ಮಾತನಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಗೊಂದಲ ಮೂಡಿಸುವುದು ಬೇಡ. ನಾವು ಬಹಳ ಕಷ್ಟದ ಸಮಯವನ್ನು ಎದುರಿಸಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭದ್ರತಾ ವಿಚಾರವಾಗಿ ಅವರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನನ್ನ ಮೂಲಭೂತ ತರಬೇತಿಯೇ ಸೇನೆಯಲ್ಲಿ ಆಗಿದೆ. 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ತರಬೇತಿ ಅವಧಿಯಿಂದ ಹಿಡಿದು ಸೇನೆಯನ್ನು ತೊರೆಯುವ ಸಮಯದವರೆಗೆ ಶಿಸ್ತಿನ ಸಿಪಾಯಿ ನಾನು. ನನಗೆ ಮೂಲಭೂತ ವಿಷಯಗಳು ತಿಳಿದಿವೆ ಎಂದು ಪಂಬಾಜ್‌ನ ಹಾಲಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ 4.5 ವರ್ಷಗಳ ಅವಧಿಯಲ್ಲಿ ನಾವು ಏನನ್ನು ಸಾಧಿಸಿದ್ದೇವೆ ಎಂಬುದರ ದಾಖಲೆಗಳಿವೆ. ನಾನು ಅಧಿಕಾರ ವಹಿಸಿಕೊಂಡಾಗ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದ ಎಲ್ಲವನ್ನು ಸಾಧಿಸಿದ್ದೇವೆ ಎಂದು ಪತ್ರಗಳನ್ನು ಪ್ರದರ್ಶಿಸಿದರು.