ಉನ್ನಾವೋ(ಉತ್ತರಪ್ರದೇಶ): ಮನೆಕೆಲಸ(ಹೋಂವರ್ಕ್) ಮಾಡಲಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬರು 5 ವರ್ಷದ ಮಗುವನ್ನು ಮನಸೋಇಚ್ಚೆ ಥಳಿಸಿದ್ದಾರೆ. ಈ ಘಟನೆ ಜುಲೈ 9 ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಮತ್ತು ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.
ಉನ್ನಾವೋದ ಅಸೋಹ ಬ್ಲಾಕ್‌ನ ಇಸ್ಲಾಂನಗರದ ಪ್ರಾಥಮಿಕ ಶಾಲೆಯ ಸುಶೀಲ್ ಕುಮಾರಿ ಮಗುವಿಗೆ ಥಳಿಸಿ ಅಮಾನತಾದ ಶಿಕ್ಷಕಿ. ಮಗು ಹೇಳಿದ ಪಾಠ ಮುಗಿಸಲಿಲ್ಲ ಎಂದು ಕ್ರೂರಿ ಶಿಕ್ಷಕಿ ಮೂವತ್ತು ಸೆಕೆಂಡುಗಳಲ್ಲಿ ಕಂದಮ್ಮನಿಗೆ 10 ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ಮಗು ಅಳುತ್ತಿದ್ದರೂ ಶಿಕ್ಷಕಿಯ ಕೋಪ ಮಾತ್ರ ತಣ್ಣಗಾಗಿಲ್ಲ. ಕೂದಲು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನು ಶಾಲೆಯ ಪಕ್ಕದ ಕಟ್ಟಡದಿಂದ ಯಾರೋ ವಿಡಿಯೋ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 9 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಮಗುವನ್ನು ಕಂಡ ಪೋಷಕರು ಆತಂಕಗೊಂಡಿದ್ದಾರೆ. ಮುಖದ ತುಂಬಾ ಕೆಂಪಾದ ಗೆರೆಗಳು ಮೂಡಿದ್ದವು. ಈ ಬಗ್ಗೆ ಶಾಲೆಗೆ ಹೋಗಿ ವಿಚಾರಿಸಿದಾಗ ಶಿಕ್ಷಕರು ಒತ್ತಡ ಹೇರಿ ರಾಜೀ ಸಂಧಾನ ಮಾಡಿಸಿದ್ದಾರೆ.
ಆದರೆ, ಇದೀಗ ಮಗುವನ್ನು ಶಿಕ್ಷಕಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯನ್ನು ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. ತಕ್ಷಣವೇ ಕ್ರಮ ಕೈಗೊಂಡ ಶಿಕ್ಷಣಾಧಿಕಾರಿ ಐ.ಎಸ್ ದಿವ್ಯಾಂಶು, ಕ್ರೂರಿ ಶಿಕ್ಷಕಿ ಸುಶೀಲ್ ಕುಮಾರಿ ಸೇರಿದಂತೆ ಪ್ರಾಂಶುಪಾಲರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಇವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಓದಿ: ಫ್ರೀಸ್ಟೈಲ್ ಫುಟ್ಬಾಲ್ನಿಂದ ಹವಾ ಸೃಷ್ಟಿಸುತ್ತಿರುವ ಯುವಕ.. ವಿಡಿಯೋ