ಎಟಾ (ಉತ್ತರ ಪ್ರದೇಶ): ಇಲ್ಲಿನ ಬಾಬುಗಂಜ್ ಮಾರುಕಟ್ಟೆಯಲ್ಲಿ ಮಹಿಳೆಯರ ಹೈಡ್ರಾಮ ನಡೆಯಿತು. ಇಲ್ಲೋರ್ವ ಯುವತಿಯು ಮಹಿಳೆಗೆ ಆಂಟಿ ಎಂದು ಕರೆದಿದ್ದಕ್ಕೆ ಆಕೆ ಗೂಸಾ ತಿಂದಿದ್ದಾಳೆ.
‘ಕರ್ವಾ ಚೌತ್’ ಶಾಪಿಂಗ್ಗಾಗಿ ಬಾಬುಗಂಜ್ ಮಾರುಕಟ್ಟೆಗೆ ಮಹಿಳೆಯರ ದಂಡೇ ಹರಿದುಬರುತ್ತಿದೆ. ಕಾಲಿಡಲು ಆಗದಷ್ಟು ಜನಜಂಗುಳಿಯಿಂದ ಮಾರುಕಟ್ಟೆ ಕೂಡಿದೆ. ಈ ವೇಳೆ ಅಂಗಡಿವೊಂದರಲ್ಲಿ ಮಹಿಳೆಗೆ 19 ವರ್ಷದ ಯುವತಿಯೊಬ್ಬಳು ‘ಎಕ್ಸ್ಕ್ಯೂಸ್ಮಿ ಆಂಟಿ’ ಎಂದು ಕರೆದಿದ್ದಾಳೆ. ಇದರಿಂದ ಕುಪಿತಗೊಂಡ ಮಹಿಳೆ ಯುವತಿಯೊಂದಿಗೆ ಜಗಳಕ್ಕಿಳಿದು ಥಳಿಸಿದ್ದಾರೆ.
ಇವರ ಜಗಳ ನೋಡು-ನೋಡುತ್ತಿದ್ದಂತೆ ತಾರಕಕ್ಕೇರಿದೆ. ಪೊಲೀಸರು ಮಧ್ಯೆ ಪ್ರವೇಶಿಸಿದ್ರೂ ಸಹ ಜಗಳ ಮಾತ್ರ ತಣ್ಣಗಾಗಲಿಲ್ಲ. ಮಹಿಳೆಯರ ಗುಂಪು ಯುವತಿ ಮೇಲೆ ಹಲ್ಲೆ ಮಾಡಿದೆ. ಬಳಿಕ ಮಹಿಳಾ ಕಾನ್ಸ್ಟೇಬಲ್ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.
ಆಂಟಿ ಎಂದಿದ್ದಕ್ಕೆ ಮಹಿಳೆಯು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಕುಟುಂಬಸ್ಥರನ್ನು ಕರೆಸಿ ಎಚ್ಚರಿಕೆ ನೀಡಿದ್ದೇವೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಕಾಂಚನಾ ಕಟಿಯಾರ್ ಹೇಳಿದ್ದಾರೆ.
ಮಹಿಳೆಯರ ಹೊಡೆದಾಟದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.