ನವದೆಹಲಿ: ನೇಪಾಳದ ನೈಟ್‌ಕ್ಲಬ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ದೃಶ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಈಗಲೂ ಟೀಕಾ ಪ್ರಹಾರಗಳು ಮುಂದುವರೆದಿವೆ. ರಾಹುಲ್ ಗಾಂಧಿ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಕೂಡಾ ಕುತೂಹಲದ ಕೇಂದ್ರ ಬಿಂದುವಾಗಿದ್ದರು. ನೇಪಾಳ, ಭಾರತದಲ್ಲಿ ಆ ಮಹಿಳೆ ಯಾರು ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ರಾಹುಲ್ ಗಾಂಧಿ ಭಾರತಕ್ಕೆ ವಾಪಸ್ ಆಗಿದ್ದಾರೆ.
ನೇಪಾಳದ ಪ್ರಖ್ಯಾತ ಲಾರ್ಡ್ ಆಫ್ ಡ್ರಿಂಕ್ಸ್ (LoD) ನೈಟ್ಕ್ಲಬ್ನಲ್ಲಿ ರಾಹುಲ್ ಜೊತೆಯಲ್ಲಿ ಮದ್ಯಪಾನ ಮಾಡುತ್ತಿದ್ದ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ಕೆಲವು ಭಾರತೀಯ ಮಾಧ್ಯಮಗಳು ವರದಿ ಮಾಡಿದ ನಂತರ ಕೆಲವು ವದಂತಿಗಳು ಕಾಳ್ಗಿಚ್ಚಿನಂತೆ ಹರಡಿವೆ. ಆದರೆ ಕೆಲವು ಮೂಲಗಳ ಪ್ರಕಾರ ಆಕೆ ಹೌ ಯಾಂಕಿ ಅಲ್ಲ ಎಂಬುದು ದೃಢಪಟ್ಟಿದೆ.
ಸೋಮವಾರ ಸಂಜೆ, ಮಹಿಳೆ ಸೇರಿದಂತೆ ಕೆಲವು ಸ್ನೇಹಿತರೊಂದಿಗೆ ರಾಹುಲ್ ಅವರನ್ನು ನೈಟ್ಕ್ಲಬ್ನಲ್ಲಿ ಗುರುತಿಸಲಾಗಿದೆ. ನೇಪಾಳದ ವಲಸೆ ಇಲಾಖೆ ಮೂಲಗಳನ್ನು ಉಲ್ಲೇಖಿಸಿ, ಕಾಂತಿಪುರ್ ನ್ಯಾಷನಲ್ ಡೈಲಿ ಹೇಳುವಂತೆ ರಾಹುಲ್ ಜೊತೆ ಕಾಣಿಸಿಕೊಂಡ ಮಹಿಳೆ ಭಾರತೀಯ ಮೂಲದ ಪೋರ್ಚುಗೀಸ್ ಮಹಿಳೆ ಆಗಿದ್ದು, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಐಎಎನ್‌ಎಸ್‌ಗೆ ನೇಪಾಳದ ವಲಸೆ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿ ಬಳಿ ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್ ಇದ್ದು, ರಾಹುಲ್ ಗಾಂಧಿ ಜೊತೆಗೆ ಸುಬ್ರಮಣ್ಯಂ ಗಾಂಧಿ ಮತ್ತು ಕಲಾವತಿ ಗಾಂಧಿ ಎಂಬುವವರು ನೇಪಾಳದಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ಹಾಜರಾಗಿದ್ದಾರೆ.
ರಾಹುಲ್ ಗಾಂಧಿ ಮಂಗಳವಾರ ಸಂಜೆ ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ಮದುವೆಗೆ ತೆರಳಿದ್ದಾರೆ. ನಂತರ ರಾತ್ರಿ ಮತ್ತು ಮರುದಿನ ಕಠ್ಮಂಡು ಬಳಿಯ ರೆಸಾರ್ಟ್‌ಗೆ ತೆರಳಿದ್ದು, ಗುರುವಾರ ಸಂಜೆ ಅವರು ವಿಸ್ತಾರಾ ವಿಮಾನದಲ್ಲಿ ದೆಹಲಿಗೆ ತೆರಳಿದರು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್ ಗಾಂಧಿ: ಇವರು ಯಾರು ಗೊತ್ತೇ?