ಚಂಡೀಗಢ (ಹರಿಯಾಣ): ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ನರ್ಸ್ ವೇಷದಲ್ಲಿ ಬಂದು ಇಂಜೆಕ್ಷನ್ ಕೊಟ್ಟು ಆಕೆಯ ಕೊಲೆಗೆ ಯತ್ನಿಸಿದ್ದ ಘಟನೆ ಚಂಡೀಗಢದಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯದ ಸಂಬಂಧ ಮಹಿಳೆಯ ಸಹೋದರ ಹಾಗೂ ಇಂಜೆಕ್ಷನ್ ನೀಡಿದ್ದ ನಕಲಿ ನರ್ಸ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ನರ್ಸ್ ನೀಡಿದ ಇಂಜೆಕ್ಷನ್ ಕಾರಣ 24 ವರ್ಷದ ಮಹಿಳೆಯ ಆರೋಗ್ಯ ಹದಗೆಟ್ಟಿದ್ದು, ಆಕೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಂಧಿತ ಆರೋಪಿಗಳನ್ನು ಸಂತ್ರಸ್ತೆಯ ಸಹೋದರ ಜಸ್ಮೀತ್ ಸಿಂಗ್, ಸಂಬಂಧಿ ಬೂಟಾ ಸಿಂಗ್, ಸ್ನೇಹಿತ ಮನ್ದೀಪ್ ಸಿಂಗ್ ಮತ್ತು ಲಸಿಕೆ ನೀಡಿದ್ದ ಮಹಿಳೆ ಜಸ್ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ.
ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪ: ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆಯು 2022ರಲ್ಲಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆಗೆ ಆಕೆಯ ಕುಟುಂಬಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೂ, ತನ್ನ ಸ್ವಂತ ಇಚ್ಛೆಯಂತೆ ವಿವಾಹವಾದ ಬಗ್ಗೆ ಕುಟುಂಬಸ್ಥರು ಕೋಪ ಕಂಡಿದ್ದರು. ಇದೀಗ ಮಹಿಳೆಯು ನವೆಂಬರ್ 3ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕಿಡ್ನಿ ಸಮಸ್ಯೆಯಿಂದ ಚಂಡೀಗಢ ಆಸ್ಪತ್ರೆಗೆ ದಾಖಲಾಗಿದ್ದರು.
ಇಲ್ಲಿನ ನೆಹರೂ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಸ್ತ್ರೀರೋಗ ಚಿಕಿತ್ಸಾ ವಿಭಾಗದಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವಿಷಯ ತಿಳಿದ ಸಹೋದರ ಜಸ್ಮೀತ್ ಸಿಂಗ್ ಮತ್ತು ಗ್ಯಾಂಗ್ ಆಕೆಯ ಕೊಲೆ ಪ್ಲಾನ್ ರೂಪಿಸಿದೆ. ಅಂತೆಯೇ, ನವೆಂಬರ್ 15ರಂದು ಮತ್ತೊಬ್ಬ ಆರೋಪಿ ಜಸ್ಪ್ರೀತ್ ಕೌರ್ ನರ್ಸ್ ವೇಷದಲ್ಲಿ ವಾರ್ಡ್ಗೆ ಬಂದು ಇಂಜೆಕ್ಷನ್ ನೀಡಿದ್ದಾಳೆ. ಇದರ ನಂತರ ಆಕೆಯ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದೆ. ಮತ್ತೊಂದೆಡೆ, ಇಂಜೆಕ್ಷನ್ ನೀಡಿ ನರ್ಸ್ ವೇಷದಲ್ಲಿ ಬಂದಿದ್ದ ಜಸ್ಪ್ರೀತ್ ಕೌರ್ ಅಲ್ಲಿಂದ ಪಲಾಯನ ಮಾಡಿದ್ದಾಳೆ. ಇದರಿಂದ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಜೊತೆಗಿದ್ದ ಸಂಬಂಧಿಕ ಮಹಿಳೆಯೊಬ್ಬರು ಅನುಮಾನಗೊಂಡು, ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ.
ಆದರೆ, ಇಂಜೆಕ್ಷನ್ ನೀಡಿ ನರ್ಸ್ ಯಾರು ಎಂಬ ಸುಳಿವು ಸಿಕ್ಕಿಲ್ಲ. ಜೊತೆಗೆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಲಾಗಿದೆ. ಚಂಡೀಗಢ ಸೆಕ್ಟರ್-11ರ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಮಂಗಳವಾರ ಆರೋಪಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಹೋದರಿ ಕೊಲೆಗೆ ಸಂಚು ರೂಪಿಸಿದ್ದ ಸಹೋದರ- ಎಸ್‌ಎಸ್‌ಪಿ: ಚಂಡೀಗಢ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಪ್ರತಿಕ್ರಿಯಿಸಿ, ಆಸ್ಪತ್ರೆಯಲ್ಲಿ ನಿಗೂಢವಾಗಿ ಇಂಜೆಕ್ಷನ್ ನೀಡಿದ ಬಳಿಕ ಮಹಿಳೆಯ ಆರೋಗ್ಯ ಹದಗೆಟ್ಟ ಬಗ್ಗೆ ಜಿತೇಂದ್ರ ಕೌರ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆಸ್ಪತ್ರೆಯ ಎಲ್ಲ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ನರ್ಸ್ ವೇಷದಲ್ಲಿ ಬಂದಿದ್ದ ಮಹಿಳೆಯ ಗುರುತು ಪತ್ತೆ ಹಚ್ಚಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ಸಂತ್ರಸ್ತೆಯ ಸಹೋದರ ಜಸ್ಮೀತ್ ಸಿಂಗ್ ಸೇರಿ ಇತರ ಮೂವರ ಹೆಸರನ್ನು ಬಾಯ್ಬಿಟ್ಟಿದ್ದಾಳೆ. ಸಂತ್ರಸ್ತೆಯು ಪ್ರೇಮ ವಿವಾಹವಾಗಿದ್ದರಿಂದ ಆಕೆಯ ಸಹೋದರ ಕೋಪಗೊಂಡು ಕೊಲೆಗೆ ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ಖಚಿತವಾಗಿದೆ. ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ಮಗಳ ಪ್ರಿಯಕರನ ಹತ್ಯೆ ಆರೋಪ: ಯುವತಿ ತಂದೆ ಬಂಧನ