ಜಲ್ಗಾಂವ್ (ಮಹಾರಾಷ್ಟ್ರ): ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರನಡೆಸಿದ ಮೂವರು ವ್ಯಕ್ತಿಗಳು ಆಕೆಗೆ ವಿಷ ಕುಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು.
ಯುವತಿ ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಮೂವರು ವ್ಯಕ್ತಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಅತ್ಯಾಚಾರ ನಡೆಸಿದ ನಂತರ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಯುವತಿಯ ಕುಟುಂಬ ಆರೋಪಿಸಿದೆ.
ಆರೋಪಿಗಳಲ್ಲಿ ಒಬ್ಬ ವ್ಯಕ್ತಿ, ನನ್ನ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದ, ಆದರೆ, ನಾನು ಆವನನ್ನು ತಿರಸ್ಕರಿಸಿದ್ದೆ ಎಂದು ಯುವತಿ ಬಹಿರಂಗಪಡಿಸಿದ್ದಾಳೆ ಅಂತ ಪೋಷಕರು ಮಾಹಿತಿ ನೀಡಿದ್ದಾರೆ.
ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿ, ಆ ವ್ಯಕ್ತಿ ಮತ್ತು ಇತರ ಇಬ್ಬರು ಅವಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ. ಅವಳು ವಿರೋಧಿಸಿದಾಗ, ದೈಹಿಕವಾಗಿ ಹಲ್ಲೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ.
ಘಟನೆ ನಂತರ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವಿಗೀಡಾಗಿದ್ದಾಳೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವಷ್ಟೆ ಅತ್ಯಾಚಾರ ನಡೆದಿದೆಯೋ? ಇಲ್ಲವೋ ಎಂಬ ಬಗ್ಗೆ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.