ಪಣಜಿ (ಗೋವಾ): ಮೇಕೆಗಳನ್ನು ಮೇಯಿಸಲು ಹೋಗಿದ್ದ ಮಹಿಳೆಯನ್ನು ಮೊಸಳೆಯೊಂದು ನೀರಿಗೆ ಎಳೆದೊಯ್ದು ಬಲಿ ಪಡೆದಿದೆ. ಉತ್ತರ ಗೋವಾದ ಅಮ್ಥಾನೆ ಅಣೆಕಟ್ಟೆಯಲ್ಲಿ ಶನಿವಾರ ಘಟನೆ ನಡೆದಿದೆ. ಮೃತ ಮಹಿಳೆಯನ್ನು 45 ವರ್ಷದ ಸಂಗೀತಾ ಬೇಬಲ್ ಶಿಂಗಾಡಿ ಎಂದು ಗುರುತಿಸಲಾಗಿದೆ. ಅಣೆಕಟ್ಟೆಯ ಸಮೀಪ ಈ ಮಹಿಳೆ ತನ್ನ ಮೇಕೆಗಳನ್ನು ಮೇಯಿಸಲು ಹೋಗಿದ್ದರು ಎಂದು ತಿಳಿದು ಬಂದಿದೆ.
ಮಧ್ಯಾಹ್ನ 2.20 ರ ಸುಮಾರಿಗೆ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿ ಮಹಿಳೆಯನ್ನು 45 ವರ್ಷದ ಸಂಗೀತಾ ಬೇಬಲ್ ಶಿಂಗಾಡಿ ಎಂದು ಗುರುತಿಸಿದ್ದಾರೆ. ಮೃತ ಮಹಿಳೆ ಮೇಕೆ ಮೇಯಿಸಲು ಹೋಗಿದ್ದು ನೀರಿನ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಮೊಸಳೆ ಅವರನ್ನು ನೀರಿಗಳೆದಿದೆ ಎನ್ನಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿಗಳು ಹೇಳಿದರು. ಘಟನೆಯ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿ, ಅಣೆಕಟ್ಟೆಯ ಬಳಿ ಸಾಕಷ್ಟು ಮೊಸಳೆಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಣೆಕಟ್ಟೆಯ ಉದ್ದಕ್ಕೂ ಹಳಿ ನಿರ್ಮಿಸಿ ಜನರು ನೀರಿಗಿಳಿಯದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಮೃಗಾಲಯದ ಬೋಟಿಂಗ್ ಕೊಳದಲ್ಲಿ ಮೊಸಳೆ ಪ್ರತ್ಯಕ್ಷ
ಮೀನು ಹಿಡಿಯಲು ಹೋದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ಇಂಥದ್ದೇ ಘಟನೆ ಕಳೆದ ಆಗಸ್ಟ್ನಲ್ಲಿ ನಡೆದಿತ್ತು. ದಾಂಡೇಲಿಯ ಸುರೇಶ್ ವಸಂತ್ ತೇಲಿ ಎನ್ನುವ ವ್ಯಕ್ತಿ ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದಾಗ ಅಲ್ಲಿದ್ದ ಮೊಸಳೆ ಎಳೆದೊಯ್ದಿದೆ. ಈ ವ್ಯಕ್ತಿ ಕಾಣೆಯಾದ ದಿನ ರೆಸ್ಕ್ಯೂ ತಂಡ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ ಮರುದಿನ ಶೋಧ ಕಾರ್ಯ ನಡೆಸಿದಾಗ ಕಾಳಿ ನದಿಯಲ್ಲಿ ವ್ಯಕ್ತಿಯ ಮೃತದೇಹವನ್ನು ರಕ್ಷಣಾ ತಂಡ ಪತ್ತೆ ಮಾಡಿತ್ತು.
1 ವರ್ಷದಲ್ಲಿ 5 ಜನರನ್ನು ಬಲಿ ಪಡೆದ ಮೊಸಳೆಗಳು: ದಾಂಡೇಲಿ ಪ್ರವಾಸಿಗರ ನೆಚ್ಚಿನ ತಾಣ. ಆದರೆ ಕಳೆದ ಒಂದು ವರ್ಷದಲ್ಲಿ ಕಾಳಿ ನದಿಯಲ್ಲಿರುವ ಮೊಸಳೆಗಳು ಐವರನ್ನು ಬಲಿ ಪಡೆದಿವೆ. ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಈ ಭಾಗದ ಜನರು ನದಿಗಳಲ್ಲಿ ತಮ್ಮ ದಿನನಿತ್ಯದ ಕೆಲಸ ಮಾಡಲು ನದಿಗೆ ಇಳಿದಾಗ ಮೊಸಳೆಗಳು ತಕ್ಷಣ ದಾಳಿ ಮಾಡಿ ಎಳೆದೊಯ್ಯತ್ತವೆ. ಹೀಗಾಗಿ ಜನರು ಹೆಚ್ಚುವರಿ ಮೊಸಳೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ವಿವಿಧೆಡೆ ಹಾಗು ವಿದೇಶಗಳಲ್ಲೂ ಮೊಸಳೆ ದಾಳಿ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಜನರಲ್ಲಿ ಆತಂಕ, ಭಯ ಮೂಡಿಸುತ್ತಿವೆ. ಹೀಗಾಗಿ ಅವುಗಳನ್ನು ಸ್ಥಳಾಂತರಿಸುವಂತೆ ಜನರು ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿರುತ್ತಾರೆ.
ಇದನ್ನೂ ಓದಿ: 'ಎನ್‌ಕೌಂಟರ್ ಸ್ಪೆಷಲಿಸ್ಟ್' ದಯಾ ನಾಯಕ್ ಈಗ ಮುಂಬೈ ಕ್ರೈಂ ಬ್ರ್ಯಾಂಚ್ ಇನ್ಸ್‌ಪೆಕ್ಟರ್!