ಕಾಕಿನಾಡ (ಆಂಧ್ರಪ್ರದೇಶ): ಕೊರೊನಾ ವೈರಸ್ ಮತ್ತು ಮಾಟಮಂತ್ರಕ್ಕೆ ಹೆದರಿ ಮನೆ ಬಿಟ್ಟು ಹೊರಗೆ ಬಾರದ ತಾಯಿ-ಮಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿ, ಮಾನಸಿಕ ಸ್ಥೈರ್ಯ ತುಂಬುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದ್ದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ.
ಕಾಕಿಕಾಡ ಜಿಲ್ಲೆಯ ಕೊಯ್ಯೂರು ಗ್ರಾಮದ ನಿವಾಸಿಗಳಾದ ತಾಯಿ-ಮಗಳು ಕಳೆದ 2 ವರ್ಷಗಳಿಂದ ಬೆಳಗಿನ ವೇಳೆ ಮನೆ ಬಿಟ್ಟು ಆಚೆಯೇ ಬಂದಿಲ್ಲ. ರಾತ್ರಿ ವೇಳೆ ಬಹಿರ್ದೆಸೆಗೆ ಹೊರಬರುವುದನ್ನು ಬಿಟ್ಟರೆ ಅವರು ಹಗಲಲ್ಲಿ ಯಾವ ಕಾರಣಕ್ಕೂ ಹೊಸ್ತಿಲು ಕೂಡ ದಾಟುತ್ತಿರಲಿಲ್ಲವಂತೆ. ಈಚೆಗೆ ಪತ್ನಿಯ ಆರೋಗ್ಯ ಹದಗೆಟ್ಟ ಕಾರಣ ಪತಿ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದು ಮನೆಗೆ ಬಂದ ಅಧಿಕಾರಿಗಳು ಇಬ್ಬರನ್ನೂ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ತಮಗಿರುವ ಭಯದಿಂದ ಅವರು ಹೊರಬಂದಿಲ್ಲ. ಇದರಿಂದ ತಾಯಿ-ಮಗಳನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ವೇಳೆ ಮಗಳು, ನಾವಿಬ್ಬರು ಮನೆಯಲ್ಲಿದ್ದರೆ ನಿಮಗೇನಾದರು ಸಮಸ್ಯೆಯಾಗುತ್ತಿದೆಯಾ ಎಂದು ವೈದ್ಯರಿಗೇ ಮರುಪ್ರಶ್ನೆ ಹಾಕಿದ್ದಾಳೆ.
ಕುಟುಂಬಸ್ಥರ ಪ್ರಕಾರ, ಕಳೆದೆರಡು ವರ್ಷಗಳಿಂದ ತಾಯಿ-ಮಗಳಿಗೆ ಕುಟುಂಬದ ಹಿರಿಯರು ಮನೆಯಲ್ಲೇ ಪ್ರತಿದಿನ ಆಹಾರ ಒದಗಿಸುತ್ತಿದ್ದರು. ಆದರೆ, ಒಂದು ವಾರದಿಂದೀಚೆಗೆ ಅನಾರೋಗ್ಯ ಕಾಡಿದ ಕಾರಣ ಅವರನ್ನು ಮನೆಯಿಂದ ಹೊರಬರಲು ಹೇಳಲಾಯಿತು. ಇದಕ್ಕೊಪ್ಪದ ಕಾರಣ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ಪತ್ನಿ ಮತ್ತು ಮಗಳು ಮಾಟಮಂತ್ರಕ್ಕೆ ಹೆದರುತ್ತಿದ್ದಾರೆ. ಹೀಗಾಗಿ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸಿದ್ದರು. ನಾನು ಎಷ್ಟೇ ಹೇಳಿದರೂ ಅವರು ಕೇಳುತ್ತಿರಲಿಲ್ಲ. ರಾತ್ರಿಯಲ್ಲಿ ಮಾತ್ರ ನಿಸರ್ಗ ಕರೆಗೆ ಹೊರಬರುತ್ತಿದ್ದರು ಎಂದು ಪತಿ ಸೂರಿಬಾಬು ತಿಳಿಸಿದರು.
ಓದಿ: ಕೊರೊನಾ ಮುನ್ನೆಚ್ಚರಿಕೆ: ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ