ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡ ಬಳಿಕ ಪ್ರತಿಭಟನಾನಿರತ ರೈತರು ಧರಣಿ ನಿಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದು, ಬರೋಬ್ಬರಿ ಒಂದು ವರ್ಷದ ಬಳಿಕ ದೆಹಲಿ-ಬಹದ್ದೂರ್‌ಗಢ ಹೆದ್ದಾರಿ ಬಳಿಯ ಟಿಕ್ರಿ ಗಡಿ ಸಹಜ ಸ್ಥಿತಿಗೆ ಮರಳಿದೆ.
ಕಳೆದೊಂದು ವರ್ಷದಿಂದ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾರಣ ಜನರ ಹಾಗೂ ವಾಹನ ಸಂಚಾರಕ್ಕೆ ಬಹಳಷ್ಟು ಅಡ್ಡಿ ಉಂಟಾಗಿತ್ತು. ಟಿಕ್ರಿ ಗಡಿಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಇಳಿದು ಕೂಲಿ ಕಾರ್ಮಿಕರಿಂದ ಹಿಡಿದು ಅನೇಕರು ಬೇರೆ ಸ್ಥಳಗಳಿಗೆ ತೆರಳಬೇಕಿತ್ತು. ಆದರೆ, ಧರಣಿಯಿಂದಾಗಿ ಇವೆಲ್ಲದಕ್ಕೂ ಬ್ರೇಕ್ ಬಿದ್ದಿತ್ತು. ಅಷ್ಟೇ ಅಲ್ಲ ವ್ಯಾಪಾರವಿಲ್ಲದೇ ಹತ್ತಿರದಲ್ಲಿದ್ದ ಅಂಗಡಿ ಮುಂಗಟ್ಟು, ಮೆಡಿಕಲ್ ಶಾಪ್ಗಳು, ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಗಿತ್ತು. ಇದೀಗ ಇವೆಲ್ಲವೂ ಮತ್ತೆ ತೆರೆದುಕೊಂಡಿದೆ.
ಇದನ್ನೂ ಓದಿ: 11 ತಿಂಗಳ ನಂತರ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್ ತೆರವುಗೊಳಿಸಿದ ದೆಹಲಿ ಪೊಲೀಸರು
ಅನ್ನದಾತರ ಹೋರಾಟಕ್ಕೆ ಮಣಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯ ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನ ಅಂದರೆ ನವೆಂಬರ್ 29ರಂದು 'ಕೃಷಿ ಕಾನೂನುಗಳ ರದ್ದತಿ ಮಸೂದೆ 2021'ಯನ್ನು ಅಂಗೀಕರಿಸಿತು.
ಆ ಬಳಿಕ ನಿಧಾನವಾಗಿ ಸಿಂಘು, ಟಿಕ್ರಿ, ಗಾಜಿಪುರ ಗಡಿಗಳಲ್ಲಿ ಪ್ರತಿಭಟಿಸುತ್ತಿದ್ದ ರೈತರು ಕಾಂಕ್ರಿಟ್ ಬ್ಲಾಕ್ಗಳನ್ನು, ಟೆಂಟ್ಗಳನ್ನು ತೆರವುಗೊಳಿಸಿ ತಮ್ಮ ಮನೆಗೆ ಹಿಂದಿರುಗಲು ಆರಂಭಿಸಿದ್ದಾರೆ. ಶೇ.60 ರಿಂದ ಶೇ.70 ರಷ್ಟು ರೈತರು ಅಲ್ಲಿಂದ ಜಾಗ ಖಾಲಿ ಮಾಡಿದ್ದು, ಡಿಸೆಂಬರ್ 15 ರೊಳಗೆ ಪ್ರತಿಭಟನಾ ಸ್ಥಳಗಳ ತೆರವು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.