ನವದೆಹಲಿ: ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರದ ಕಿತ್ತಾಟದ ನಡುವೆಯೂ ಸುಪ್ರೀಂಕೋರ್ಟ್ಗೆ ಮೂವರು ನ್ಯಾಯಮೂರ್ತಿಗಳನ್ನು ಗುರುವಾರ ನೇಮಕ ಮಾಡಲಾಗಿದೆ. ಇದರೊಂದಿಗೆ ಸುಪ್ರೀಂಕೋರ್ಟ್ 34 ನ್ಯಾಯಮೂರ್ತಿಗಳ ಸ್ಥಾನ ಭರ್ತಿಯಾಗಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಸತೀಶ್ ಚಂದ್ರ ಶರ್ಮಾ, ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸಂದೀಪ್ ಮೆಹ್ತಾ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಗುರುವಾರ ಪ್ರಮಾಣ ವಚನ ಬೋಧಿಸಿದರು. ಈ ನೇಮಕದೊಂದಿಗೆ ಖಾಲಿ ಇದ್ದ ಮೂರು ಹುದ್ದೆಗಳು ಭರ್ತಿಯಾದವು. ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು , ಹಿರಿಯ ವಕೀಲರು, ಬಾರ್‌ನ ಸದಸ್ಯರು, ಹೊಸದಾಗಿ ನೇಮಕಗೊಂಡ ಜಸ್ಟೀಸ್ಗಳ ಕುಟುಂಬ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸೋಮವಾರವಷ್ಟೆ ಶಿಫಾರಸು ಮಾಡಿತ್ತು. ಇವರ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿತು. ನಂತರ ಇಂದೇ ಮೂವರಿಗೆ ಪ್ರಮಾಣ ಬೋಧಿಸಲಾಯಿತು.
ಜಡ್ಜ್ಗಳ ಮೇಲೆ ಕೆಲಸದ ಒತ್ತಡ: ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಜಡ್ಜ್ಗಳ ಮೇಲೆ ಕೆಲಸ ಒತ್ತಡವಿದೆ. ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಕೋರ್ಟ್ ಪೂರ್ಣ ಪೀಠವನ್ನು ಹೊಂದುವುದು ಅಗತ್ಯವಾಗಿದೆ ಎಂದು ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸುಯಾ ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಹೇಳಿತ್ತು. ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರ ಬಲವನ್ನು ಹೊಂದಿದ್ದು, ಈವರೆಗೂ 31 ಜಡ್ಜ್ಗಳು ಕಾರ್ಯನಿರ್ವಹಿಸುತ್ತಿದ್ದರು. ಮೂವರು ಅನುಪಸ್ಥಿತಿಯಿಂದ ದೊಡ್ಡ ಪ್ರಕರಣಗಳೂ ಸೇರಿದಂತೆ ಹಲವು ಅರ್ಜಿಗಳು ಬಾಕಿ ಉಳಿದುಕೊಂಡಿವೆ. ನಿರಂತರವಾಗಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, ನ್ಯಾಯಮೂರ್ತಿಗಳ ಕೆಲಸದ ಹೊರೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣಕ್ಕೆ ಭರ್ತಿ ಮಾಡುವ ಅಗತ್ಯವಿದೆ ಎಂದು ಕೊಲಿಜಿಯಂ ಹೇಳಿತ್ತು.
ನೇಮಕವಾದ ಜಡ್ಜ್ಗಳು ಇವರು: ದೆಹಲಿಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸತೀಶ್ ಚಂದ್ರ ಶರ್ಮಾ, ರಾಜಸ್ಥಾನ ಹೈಕೋರ್ಟ್ ಸಿಜೆ ಆಗಸ್ಟಿನ್ ಜಾರ್ಜ್ ಮಸಿಹ್, ಗುವಾಹಟಿ ಹೈಕೋರ್ಟ್ನ ಮುಖ್ಯ ಜಡ್ಜ್ ಸಂದೀಪ್ ಮೆಹ್ತಾ ಅವರಿಗೆ ಸುಪ್ರೀಂಕೋರ್ಟ್ನ ಜಡ್ಜ್ಗಳಾಗಿ ಬಡ್ತಿ ನೀಡಲಾಗಿದೆ. ನ್ಯಾಯಾಧೀಶರ ಅರ್ಹತೆ, ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿದ ನಂತರ ಕೊಲಿಜಿಯಂ ಇವರ ಬಡ್ತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಇದನ್ನೂ ಓದಿ: ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಸಿಂಧು: 'ಲಕ್ಕಿ ಡ್ರಾ' ಆಯ್ಕೆ ರದ್ಧತಿ ಕೋರಿ ಸಲ್ಲಿಸಿದ ಅರ್ಜಿ ವಜಾ