ಪಾಟ್ನಾ (ಬಿಹಾರ): ಬಿಹಾರದಲ್ಲಿ ಸರ್ಕಾರ ರಚನೆಯ ಮುನ್ನ ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ (ಹೆಚ್‌ಎಎಂ) ಪಕ್ಷ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಜೊತೆಯೇ ಉಳಿಯಲಿದೆ ಎಂದು ಹೇಳಿದೆ.
"ಎನ್‌ಡಿಎ ಜೊತೆ ಇರುತ್ತೇವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಹಿಂದೂಸ್ತಾನಿ ಅವಾಮ್ ಮೋರ್ಚಾ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ನಮ್ಮ ನಾಯಕ ಜಿತನ್ ರಾಮ್ ಮಾಂಝಿ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಅವರೊಂದಿಗೆ ಇದ್ದೆವು, ಅವರೊಂದಿಗೆ ಉಳಿಯುತ್ತೇವೆ ಕೂಡ" ಎಂದು ಹೆಚ್‌ಎಎಂ ವಕ್ತಾರ ದಾನಿಶ್ ರಿಜ್ವಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಆಗಸ್ಟ್‌ನಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನ್ ಸೇರಲು ಜಿತನ್ ರಾಮ್ ಮಾಂಝಿ ಎನ್‌ಡಿಎ ತೊರೆದಿದ್ದರು. ಆದರೆ ಒಂದೆರಡು ದಿನಗಳಲ್ಲಿ ಮತ್ತೆ ಎನ್‌ಡಿಎ ಕೂಟ ಸೇರಿಕೊಂಡಿದ್ದರು.
243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಬುಧವಾರ ಘೋಷಿಸಲಾಗಿದ್ದು, ಇದರಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಪಡೆದುಕೊಂಡಿದೆ, ಅದರಲ್ಲಿ ಬಿಜೆಪಿ 74, ಜೆಡಿಯು 43, ವಿಕಾಸಶೀಲ ಇನ್ಸಾನ್ ಪಾರ್ಟಿ 4 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 4 ಸ್ಥಾನಗಳನ್ನು ಗೆದ್ದಿದೆ.