ನವದೆಹಲಿ: ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತಂತೆ ಹಾಗೂ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ವಿಚಾರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಕಾಬೂಲ್ನ ಭದ್ರತಾ ಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಬದಲಾಗುತ್ತಿದ್ದು, ಭಾರತ ಸರ್ಕಾರ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಫ್ಘಾನ್ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ನಾವು ಸಲಹೆಗಳನ್ನು ನೀಡುತ್ತಿದ್ದೇವೆ. ಭಾರತೀಯರೆಲ್ಲ ಕೂಡಲೇ ಹಿಂದಿರುಗುವಂತೆ ಕರೆ ನೀಡಿದ್ದು, ಅಲ್ಲಿನ ಹಿಂದೂ, ಸಿಖ್ ಸಮುದಾಯದ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.
ಕೆಲ ಭಾರತೀಯರು ಭಾರತಕ್ಕೆ ಹಿಂದಿರುಗಲು ಬಯಸಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಮತ್ತು ಅವರು ಹಿಂದಿರುಗಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡಲಿದ್ದೇವೆ ಎಂದರು. ಸದ್ಯ ಕಾಬೂಲ್ ಏರ್ಪೋರ್ಟ್ನಿಂದ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಅವರನ್ನು ಕರೆತರಲು ವಿಳಂಬವಾಗುತ್ತಿದೆ. ನಮ್ಮ ದೇಶದ ನಾಗರಿಕರನ್ನು ಕರೆತರಲು ವಿಮಾನಗಳ ಪುನಾರಂಭಕ್ಕಾಗಿ ಕಾಯುತ್ತಿದ್ದೇವೆ ಎಂದರು.
ಇದನ್ನೂ ಓದಿ: ಆಫ್ಘನ್ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್ಫೋರ್ಸ್ ವಿಮಾನ
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಉನ್ನತ ಮಟ್ಟದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಭಾರತೀಯರು ಮತ್ತು ನಮ್ಮ ಹಿತಾಸಕ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.