ಸಂಗಾರೆಡ್ಡಿ: ಹಬ್ಬದ ದಿನದಂದೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಕಾಪಾಡಲು ತೆರಳಿದ ಪತಿಯೂ ಬೆಂಕಿಗಾಹುತಿಯಾಗಿರುವ ಘಟನೆ ಪುಲ್ಕಲ್ ತಾಲೂಕಿನ ಲಿಂಗಂಪಲ್ಲಿಯಲ್ಲಿ ನಡೆದಿದೆ.
ಈ ಗ್ರಾಮದ ನಿವಾಸಿ ಎಲ್ಲೇಶ್ ಮತ್ತು ಸುನೀತಾ ದಂಪತಿಗೆ ಮುದ್ದಾದ ಮಗು ಇದೆ. ದಂಪತಿ ಮಧ್ಯೆ ಆಗಾಗ್ಗೆ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆದ್ರೆ ಇಂದು ಇವರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿ ಸುನೀತಾ ಹಿಂದೆ-ಮುಂದೆ ನೋಡದೆ ಮೈ-ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಧಗ ಧಗನೇ ಬೆಂಕಿಯಿಂದ ಉರಿಯುತ್ತಿದ್ದುದನ್ನು ನೋಡಿದ ಎಲ್ಲೇಶ್ ಪತ್ನಿಯನ್ನ ಕಾಪಾಡಲು ಮುಂದಾಗಿದ್ದಾನೆ. ಆದ್ರೆ ಆ ಬೆಂಕಿಯ ಕೆನ್ನಾಲಿಗೆ ಇಬ್ಬರಿಗೂ ಆವರಿಸಿದೆ. ಇದನ್ನು ನೋಡಿದ ಮಗಳು ಗಟ್ಟಿಯಾಗಿ ಕಿರುಚಿಕೊಂಡಿದ್ದಾಳೆ.
ಎಲ್ಲೇಶ್ ಮತ್ತು ಸುನೀತಾ ದಂಪತಿ ಮನೆಯಿಂದ ಶಬ್ದ ಕೇಳಿದ ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿಯಿಂದ ಸುಡುತ್ತಿದ್ದ ದಂಪತಿಯನ್ನು ರಕ್ಷಿಸಿ ಸಂಗಾರೆಡ್ಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಸುನೀತಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು.
ಎಲ್ಲೇಶ್ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುತ್ತಿದ್ದರು. ಆದ್ರೆ ಎಲ್ಲೇಶ್ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾನೆ. ಹಬ್ಬದ ದಿನದಂದೇ ಸಂತೋಷದಿಂದ ನಲಿದು ಆಟವಾಡ ಬೇಕಾಗಿದ್ದ ಮಗಳು ತಂದೆ-ತಾಯಿ ಕಳೆದುಕೊಂಡು ಅನಾಥವಾಗಿದ್ದಾಳೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.