ಬೆಂಗಳೂರು: ಭಾರತ ಸೇರಿ ವಿಶ್ವಾದ್ಯಂತ ಶುಕ್ರವಾರ ರಾತ್ರಿ ವಾಟ್ಸ್ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್ ಆ್ಯಪ್ ಸೇವೆಗಳು ಕೆಲಕಾಲ ಸ್ಥಗಿತಗೊಂಡಿದ್ದವು.
ಹಲವಾರು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಕೆಲವರು ಟ್ವಿಟ್ಟರ್ನಲ್ಲಿ ವಾಟ್ಸ್ಆ್ಯಪ್ ವೆಬ್‌ಗೆ ಲಾಗ್ ಇನ್ ಮಾಡಲು ಸಹ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.
ಈ ಸಮಸ್ಯೆಯು ರಾತ್ರಿ 10:55ರ ಸುಮಾರಿಗೆ ಪ್ರಾರಂಭವಾಯಿತು. ಫೇಸ್‌ಬುಕ್ ಒಡೆತನದ ಎಲ್ಲಾ ಅಪ್ಲಿಕೇಶನ್‌ಗಳಾದ ಮೆಸೆಂಜರ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ವಿಚಾರವಾಗಿ ಟ್ವಿಟರ್ನಲ್ಲಿ ಬಳಕೆದಾರರು ರಾತ್ರಿ 11 ರ ಸುಮಾರಿಗೆ ವರದಿ ಮಾಡಿದ್ದಾರೆ. ನಂತರ ಸುಮಾರು 11:42 ರ ವೇಳೆಗೆ ಎಲ್ಲಾ ಅಪ್ಲಿಕೇಶನ್‌ಗಳು ಪುನಃ ಕಾರ್ಯ ಆರಂಭಿಸಿವೆ.

ವಿಶ್ವದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾದ ವಾಟ್ಸ್ಆ್ಯಪ್ ಕೆಲವು ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರು ಟ್ವೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೆಸೆಂಜರ್ ಬಳಕೆದಾರರು ಸಹ ಅಪ್ಲಿಕೇಶನ್‌ಗಳು ಡೌನ್ ಆಗಿವೆ ಎಂದು ವರದಿ ಮಾಡಿದ್ದಾರೆ. ಕೆಲವರು ಟ್ವಿಟರ್ನಲ್ಲಿ ಈ ಸಂಬಂಧ ಕಾಮಿಕ್ ಮೀಮ್ಸ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಾಟ್ಸ್ಆ್ಯಪ್ ಮತ್ತು ಮೆಸೆಂಜರ್‌ನಲ್ಲಿ ಯಾವುದೇ ಸಂದೇಶಗಳನ್ನು ತಲುಪಿಸಲಾಗುತ್ತಿಲ್ಲ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. 30 ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಲಿಕೇಶನ್‌ಗಳು ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಿಲುಗಡೆ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಟೆಕ್ಟರ್ ಡಾಟ್ ಕಾಮ್ ವರದಿ ಮಾಡಿದೆ. ಆದರೆ ಸರ್ವರ್ ಡೌನ್ ಆಗಿ ಇ ಅಪ್ಲಿಕೇಶನ್‌ಗಳು ಕಾರ್ಯ ಸ್ಥಗಿತಗೊಳಿಸಿದ್ದರ ಬಗ್ಗೆ ಫೇಸ್‌ಬುಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ಆಲ್ ಇಂಗ್ಲೆಂಡ್ ಓಪನ್: ಜಪಾನ್ ಆಟಗಾರ್ತಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು