ನವದೆಹಲಿ: ಮಾರ್ಚ್ 12 ರಿಂದ ಮಧ್ಯ ಭಾರತದಾದ್ಯಂತ ಗರಿಷ್ಠ ತಾಪಮಾನವು ಹೆಚ್ಚಳವಾಗಿದೆ. ಬೇಸಿಗೆ ಕಾಲ ಪ್ರಾರಂಭ ಆಗುತ್ತಿದ್ದಂತೆ ಬಿಸಿಲ ಧಗೆ ಏರಿಕೆ ಆಗುತ್ತಲೇ ಇದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಋತು ಇರುತ್ತದೆ. ಆದರೆ, ಆರಂಭದ ಎರಡು ವಾರದಲ್ಲೇ ಜನರಿಗೆ ಸುಡುವ ಬಿಸಿಲು ಕಾಡುತ್ತಿದ್ದು, ತಾಪ ಹೆಚ್ಚಾಗಿರುವುದರಿಂದ ಈ ಬೇಸಿಗೆಯ ಕಾವು ಮತ್ತಷ್ಟು ಏರಲಿದೆ.
ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಸೌರಾಷ್ಟ್ರ-ಕಚ್, ಕೊಂಕಣ ಮತ್ತು ಪಶ್ಚಿಮ ರಾಜಸ್ಥಾನ, ಗುಜರಾತ್, ಪೂರ್ವ ರಾಜಸ್ಥಾನ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಮಾರ್ಚ್ 17 ರವರೆಗೆ ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹೀಟ್ ವೇವ್ ಕಂಡುಬರಲಿದೆ. ಮಾರ್ಚ್ 18 ರಂದು ಸಹ ಗರಿಷ್ಠ ತಾಪಮಾನದ ಕಂಡು ಬರುವ ಸಾಧ್ಯತೆಯಿದೆ. ಮಾರ್ಚ್ 16 ರಂದು ಕೊಂಕಣ ಮತ್ತು ಸೌರಾಷ್ಟ್ರ-ಕಚ್ ಭಾದರಲ್ಲಿ ಬಿಸಿ ಅಲೆಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಊಹಿಸಿದೆ. ಗುಜರಾತ್, ಪಶ್ಚಿಮ ಮಧ್ಯಪ್ರದೇಶದದಲ್ಲಿ ಮುಂದಿನ ಎರಡು ದಿನಗಳವರೆಗೆ ಉಷ್ಣ ಅಲೆಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮಾರ್ಚ್ 16 ಮತ್ತು 17 ರಂದು ಪೂರ್ವ ರಾಜಸ್ಥಾನದ ಮೇಲೆ ಹಾಗೂ ಮಾರ್ಚ್ 16 ರಿಂದ 18 ರ ವರೆಗೆ ಒಡಿಶಾದದಲ್ಲಿ ಪ್ರಖರ ಬಿಸಿಲು ಕಂಡುಬರುವ ಸಾಧ್ಯತೆಯಿದೆ ಎಂದು IMD ಹೇಳಿದೆ.
ಶಾಖದ ಅಲೆಯ ಕಾರಣಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ IMD ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ, ಈ ಮೇಲಿನ ಪ್ರದೇಶಗಳಲ್ಲಿ ಗಾಳಿಯ ಹರಿವಿನ ಮಾದರಿಯಿಂದಾಗಿ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವಿದೆ. ಈ ಪ್ರದೇಶಗಳಲ್ಲಿ ದಕ್ಷಿಣದಿಂದ ಉತ್ತರದ ಕಡೆಗೆ ಕಡಿಮೆ ಮಟ್ಟದ ಗಾಳಿ ಇರುತ್ತದೆ, ಅದು ಬಿಸಿಯನ್ನು ತರುತ್ತದೆ. ಗಾಳಿಯು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದ ಮೇಲೆ ಆಗ್ನೇಯ ದಿಕ್ಕಿನಲ್ಲಿ ಸಾಗಿದಾಗ, ಉತ್ತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದವರೆಗೆ ಹೆಚ್ಚಿನ ತಾಪಮಾನ ಕಂಡುಬರಲಿದೆ ಎಂದರು.
ಮಾರ್ಚ್ 14 ರಂದು ಗುಜರಾತ್ ಮತ್ತು ಪಶ್ಚಿಮ ರಾಜಸ್ಥಾನದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 39-41 ಡಿಗ್ರಿ ಸೆಲ್ಸಿಯಸ್ ಮತ್ತು ಆಗ್ನೇಯ ರಾಜಸ್ಥಾನ, ವಿದರ್ಭ, ಕೊಂಕಣ ಮತ್ತು ಗೋವಾದ ಕೆಲವು ಭಾಗಗಳಲ್ಲಿ 38-40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು IMD ತಿಳಿಸಿದೆ.
ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಹೀಗೆ ಮಾಡಿ: ಸ್ಕಿನ್ ಟ್ಯಾನ್ ಬೇಸಿಗೆಯಲ್ಲಿ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ನಾವು ಬಿಸಿಲಿಗೆ ಹೋದಾಗ ಚರ್ಮ ಕಪ್ಪಾಗುವುದನ್ನು ಗಮನಿಸುತ್ತೇವೆ. ಆದರೆ ಬೇಸಿಗೆಯಲ್ಲಿ ಇದು ಹೆಚ್ಚು. ಮನೆಯಿಂದ ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ಉತ್ತಮ ಅಭ್ಯಾಸ. ಇದು ಯುವಿ ಕಿರಣಗಳ ಹಿಡಿತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಯುವಿ ಕಿರಣಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತೆ ಹೀಗಾಗಿ ಟ್ಯಾನ್ ಉಂಟಾಗುತ್ತೆ. ಇದ್ರಿಂದ ನಮ್ಮ ಚರ್ಮ ಕಪ್ಪಾಗುತ್ತದೆ. ಇದ್ರಿಂದ ತ್ವಚೆಯ ಬಣ್ಣ ಬದಲಾಗುತ್ತದೆ. ಮುಖದ ಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಲೋವೆರಾ ನಮ್ಮ ದೇಹದಲ್ಲಿ ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹ ಇದನ್ನು ಬಳಸಬಹುದು. ಇದರ ಉರಿಯೂತ ನಿವಾರಕ ಗುಣಗಳು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ತರಕಾರಿ ಟ್ಯಾನ್ ಬರದಂತೆ ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ಪಾಲಕ್ ಚೂರುಗಳು, ಎಲೆಕೋಸು ಎಲೆಗಳನ್ನು ಬಳಸಬಹುದು. ಇದಕ್ಕಾಗಿ ಇವೆರಡನ್ನೂ ಫ್ರಿಡ್ಜ್ ನಲ್ಲಿಟ್ಟು ಬಳಸಿದರೆ ಹೆಚ್ಚಿನ ಫಲಿತಾಂಶ ಸಿಗುತ್ತದೆ. ತಣ್ಣನೆಯ ಎಲೆಕೋಸು ಎಲೆಗಳನ್ನು ಕಪ್ಪಾಗಿದ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಯಿರಿ. ವಾರದಲ್ಲಿ 2 ದಿನ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಇದನ್ನೂ ಓದಿ: ಮಾ. 22ರಂದು ವಾಜಪೇಯಿ ಮೈದಾನದಲ್ಲಿ ಯೋಗಿ ಆದಿತ್ಯನಾಥ್ ಪ್ರಮಾಣವಚನ?