ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇತ್ತೀಚೆಗೆ ಬಂಧಿತರಾದ ಪಶ್ಚಿಮ ಬಂಗಾಳದ ಪ್ರಭಾವಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದಿಂದ ಒಟ್ಟು 49.10 ಕೋಟಿ ನಗದು ರೂ. ಪತ್ತೆಯಾಗಿದೆ. ಇದರ ಬೆನ್ನಲ್ಲೇ 3 ಕೆಜಿ ಚಿನ್ನಾಭರಣ ಸಹ ಸಿಕ್ಕಿದೆ ಎಂದು ಹೇಳಲಾಗ್ತಿದೆ.
ಬೆಲ್ಘಾರಿಯಾ ಟೌನ್ ಕ್ಲಬ್ನಲ್ಲಿರುವ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 27.90 ಕೋಟಿ ಹಣ ಪತ್ತೆಯಾಗಿದೆ. ಇಲ್ಲಿಯವರೆಗೆ 49.10 ಕೋಟಿ ರೂ. ಎಣಿಸಲಾಗಿದ್ದು, ಉಳಿದ ಹಣಕ್ಕಾಗಿ ಎಣಿಕೆ ಕಾರ್ಯ ಮುಂದುವರೆದಿದೆ. ಕಳೆದ ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ 21.20 ಕೋಟಿ ರೂ. ನಗದು ಹಣ ಪತ್ತೆಯಾಗಿತ್ತು. ಈಗಾಗಲೇ ಅವರನ್ನ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಪಾರ್ಥ ಚಟರ್ಜಿ ಅವರನ್ನು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಕೆಲ ದಿನಗಳ ಹಿಂದೆ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಚಟರ್ಜಿ ಅವರಿಗೆ ಆಪ್ತರಾಗಿರುವ ಅರ್ಪಿತಾ ಮುಖರ್ಜಿ ಅವರ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಿಂದ ಇಡಿ ಅಧಿಕಾರಿಗಳು 21.20 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. ಇದೀಗ ಮತ್ತೊಂದು ನಿವಾಸದ ಮೇಲೆ ದಾಳಿ ನಡೆಸಿದಾಗ ಇಷ್ಟೊಂದು ಹಣ ಕಂಡು ಬಂದಿದೆ.
ಇದನ್ನೂ ಓದಿರಿ: ದೇಶಾದ್ಯಂತ ಸುದ್ದಿಯಾಗುತ್ತಿರುವ ಈ ಅರ್ಪಿತಾ ಮುಖರ್ಜಿ ಯಾರು? ಇವರ ಹಿನ್ನೆಲೆ ಹೀಗಿದೆ
ನನ್ನ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು: ಹಗರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಅರ್ಪಿತಾ ಮುಖರ್ಜಿ ಮಾತನಾಡಿ, ಸಚಿವ ಪಾರ್ಥ ಚಟರ್ಜಿಯವರು ತಮ್ಮ ಮನೆಯಲ್ಲಿ ಹಣ ಸಂಗ್ರಹಿಸುತ್ತಿದ್ದರು ಮತ್ತು ನಮ್ಮ ಮನೆಯನ್ನು ಮಿನಿ ಬ್ಯಾಂಕ್ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. 10 ದಿನಗಳಿಗೊಮ್ಮೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಅವರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಸಚಿವ ಪಾರ್ಥ ಚಟರ್ಜಿ 10 ದಿನ ಇಡಿ ಕಸ್ಟಡಿಗೆ: ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ಬಂಧನವಾಗಿರುವ ಸಚಿವ ಪಾರ್ಥ ಚಟರ್ಜಿ ಅವರನ್ನ ಕೋಲ್ಕತ್ತಾ ನ್ಯಾಯಾಲಯ 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಭುವನೇಶ್ವರದ ಏಮ್ಸ್ ನಲ್ಲಿ ಚಟರ್ಜಿ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರನ್ನ ಇಡಿ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಚಟರ್ಜಿ, ಸಚಿವ ಸ್ಥಾನಕ್ಕೆ ನಾನು ಏಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನೆ ಸಹ ಮಾಡಿದ್ದಾರೆ.
ತಪ್ಪೊಪ್ಪಿಕೊಂಡ ಮುಖರ್ಜಿ: ಪಾರ್ಥ ಚಟರ್ಜಿ ಅವರೇ ಒತ್ತಾಯಪೂರ್ವಕವಾಗಿ ನಮ್ಮ ಎರಡೂ ನಿವಾಸಗಳಲ್ಲಿ ಹಣ ಇಟ್ಟಿದ್ದರು. ಜೊತೆಗೆ ನಮ್ಮ ಮನೆಯ ಲಾಕರ್ಗಳಲ್ಲಿ ಹಣ ಇಟ್ಟು ಲಾಕ್ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಇಡಿ ಮುಂದೆ ಅರ್ಪಿತಾ ಕಣ್ಣೀರು ಹಾಕಿದ್ದಾರೆ.