ಲಖನೌ (ಉತ್ತರ ಪ್ರದೇಶ): ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಉತ್ತರ ಪ್ರದೇಶದ ರಾಜಧಾನಿ ಲಖನೌ ಮಹಾನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದೇ ಪ್ರಕರಣದಲ್ಲಿ ವಾರ್ಡ್ ಬಾಯ್‌ನನ್ನು ಬಂಧಿಸಲಾಗಿದೆ.
ಏಪ್ರಿಲ್ 30ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ ವೈದ್ಯ ಸೇರಿ ಇಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ವೈದ್ಯ ಮತ್ತು ವಾರ್ಡ್ ಬಾಯ್ ವಿರುದ್ಧ ಸಾಮೂಹಿಕ ಅತ್ಯಾಚಾರ ಸೇರಿ ಇತರ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಲಖನೌ ಉತ್ತರ ಪೊಲೀಸ್ ಉಪ ಕಮಿಷನರ್ ಎಸ್.ಎಂ.ಖಾಸಿಂ ಅಬಿದಿ ತಿಳಿಸಿದ್ದಾರೆ.
ಇದೇ ವೇಳೆ ಆರೋಪಿ ವೈದ್ಯ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಆಸ್ಪತ್ರೆಗೆ ಮಹಿಳೆ ಬಂದಿದ್ದು ನಿಜ. ಆದರೆ, ಆಕೆಯನ್ನು ಬೇರೆ ವೈದ್ಯಕೀಯ ಚಿಕಿತ್ಸೆಗೆ ರೆಫರ್ ಮಾಡಲಾಗಿತ್ತು. ಇದಾದ ನಂತರ ಆಕೆಯನ್ನು ಭೇಟಿಯಾಗಲಿಲ್ಲ ಎಂದು ವೈದ್ಯ ಹೇಳಿದ್ದಾರೆ.
ಐದೇ ದಿನದಲ್ಲಿ ನಾಲ್ಕು ರೇಪ್ ಕೇಸ್: ಲಖನೌದಲ್ಲಿ ಕಳೆದ ಐದು ದಿನಗಳಲ್ಲಿ ಕೇಳಿ ಬಂದ ನಾಲ್ಕನೇ ಅತ್ಯಾಚಾರ ಪ್ರಕರಣ ಇದಾಗಿದೆ. ಶನಿವಾರದಂದು 16 ವರ್ಷದ ಶಾಲಾ ಬಾಲಕಿಯ ಮೇಲೆ ಆಟೋ ರಿಕ್ಷಾ ಚಾಲಕ ಸೇರಿದಂತೆ ಇಬ್ಬರು ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ.
ಇದರ ಮರು ದಿನ ಎಂದರೆ ರವಿವಾರ 52 ವರ್ಷದ ಮಹಿಳೆಯೊಬ್ಬರು ತನ್ನ ಮೇಲಿನ ಅತ್ಯಾಚಾರದ ಬಗ್ಗೆ ಎಂದು ದೂರು ದಾಖಲಿಸಿದ್ದಾರೆ. ಮಂಗಳವಾರ ಪಾರ್ಕ್‌ನಲ್ಲಿ 15 ವರ್ಷದ ಬಾಲಕಿಯ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮತ್ತೆ ಸದ್ದು ಮಾಡಿದ ಖೋಟಾ ನೋಟು ದಂಧೆ: ನಾಲ್ವರು ಆರೋಪಿಗಳ ಬಂಧನ