ಹೈದರಾಬಾದ್ (ತೆಲಂಗಾಣ): ವೈ.ಎಸ್. ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ ಸಂಬಂಧ ಕಡಪ ಕ್ಷೇತ್ರದ ಸಂಸದ ವೈ.ಎಸ್. ಅವಿನಾಶ್ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದೇಶದಲ್ಲಿ ವೈ.ಎಸ್. ಅವಿನಾಶ್ ರೆಡ್ಡಿಗೆ ಸಾಕ್ಷಿಗಳನ್ನು ನಾಶ ಮಾಡದಂತೆ, ದೇಶ ತೊರೆಯದಂತೆ ಮತ್ತು ಪ್ರತಿ ಶನಿವಾರ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಅವಿನಾಶ್ ರೆಡ್ಡಿ ಪರ ವಕೀಲ ನಾಗಿ ರೆಡ್ಡಿ, ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದರು.
ಅಗತ್ಯವಿದ್ದಾಗ ಸಿಬಿಐ ಮುಂದೆ ಹಾಜರಾಗುವಂತೆ ನ್ಯಾಯಾಲಯ ಅವಿನಾಶ್ ರೆಡ್ಡಿ ಅವರಿಗೆ ನಿರ್ದೇಶಿಸಿದೆ. ಪ್ರತಿ ಶನಿವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಿಬಿಐ ಮುಂದೆ ಹಾಜರಾಗಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಿಬಿಐನ ಪೂರ್ವಾನುಮತಿ ಇಲ್ಲದೆ ಭಾರತ ಬಿಟ್ಟು ಹೋಗದಂತೆ ಸೂಚಿಸಲಾಗಿದೆ ಎಂದು ನಾಗಿ ರೆಡ್ಡಿ ಹೇಳಿದರು.
ನ್ಯಾಯಮೂರ್ತಿ ಎಂ.ಲಕ್ಷ್ಮಣ್ ಅವರಿದ್ದ ಪೀಠ, ಇಡೀ ಪ್ರಕರಣವು ಊಹಾತ್ಮಕ ಸಾಕ್ಷ್ಯದ ಮೇಲೆ ನಿಂತಿದೆ ಎಂದು ಗಮನಿಸಿದೆ. ಪ್ರಕರಣದಲ್ಲಿ ಅವಿನಾಶ್ ರೆಡ್ಡಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪ್ರತಿವಾದಿಗೆ ಯಾವುದೇ ಸರಿಯಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಸಂಪೂರ್ಣ ಸಾಕ್ಷ್ಯವು ಕೇಳಿದ ಸಾಕ್ಷ್ಯವಾಗಿದೆ. ಯಾವುದೇ ನೇರ ಸಾಕ್ಷ್ಯವಿಲ್ಲ. ಅವಿನಾಶ್ ರೆಡ್ಡಿ ಆರೋಪಿತ ಎಂಬುದಕ್ಕೆ ಸಿಬಿಐ ಮುಂದೆ ಯಾವುದೇ ಸ್ವೀಕಾರಾರ್ಹ ಸಾಕ್ಷ್ಯಗಳಿಲ್ಲ ಎಂದು ನಾಗಿ ರೆಡ್ಡಿ ವಾದಿಸಿದ್ದಾರೆ.
ಅರ್ಜಿದಾರ ಅವಿನಾಶ್ ರೆಡ್ಡಿ ಹಾಗೂ ಮೃತ ವಿವೇಕಾನಂದ ರೆಡ್ಡಿ ಅವರ ಪುತ್ರಿ ಸುನೀತಾ, ಸಿಬಿಐ ಸೇರಿದಂತೆ ಎರಡು ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಜಾಮೀನು ಅರ್ಜಿ ಕುರಿತು ಆದೇಶ ನೀಡಿತು. ನ್ಯಾಯಾಲಯವು ಅರ್ಜಿದಾರರ ವಿರುದ್ಧ ಯಾವುದೇ ಪ್ರಾಥಮಿಕ ಪ್ರಕರಣವಿಲ್ಲ ಎಂದು ತೀರ್ಮಾನಕ್ಕೆ ಬಂದಿದೆ. ಬಂಧನದ ಸಂದರ್ಭದಲ್ಲಿ ವೈಯಕ್ತಿಕ ಬಾಂಡ್‌ನ ಎರಡು ಶ್ಯೂರಿಟಿಗಳೊಂದಿಗೆ ರೂ.5,00,000 ಶ್ಯೂರಿಟಿಗಳನ್ನು ಒದಗಿಸುವ ಕುರಿತು ಅರ್ಜಿದಾರ ಅವಿನಾಶ್ ರೆಡ್ಡಿಗೆ ಜಾಮೀನು ಮಂಜೂರು ಮಾಡುವ ಆದೇಶ ನೀಡಿದೆ ಎಂದು ನಾಗಿ ರೆಡ್ಡಿ ಮಾಹಿತಿ ನೀಡಿದರು
ಇದನ್ನೂ ಓದಿ: ಕಡಪ ಸಂಸದ ಅವಿನಾಶ್ ರೆಡ್ಡಿ ವಿರುದ್ಧ ಮೇ 31ರವರೆಗೆ ಯಾವುದೇ ಕಠಿಣ ಕ್ರಮ ಬೇಡ: ತೆಲಂಗಾಣ ಹೈಕೋರ್ಟ್
ಪ್ರಕರಣದ ಹಿನ್ನೆಲೆ: 2019 ರ ಮಾರ್ಚ್ 15ರಂದು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಕೊಲೆ ನಡೆದಿತ್ತು. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರು. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಕೂಡ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಾಗಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ತಮ್ಮ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಕೊಲೆಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವನ್ನು ಸಿಬಿಐ ವ್ಯಕ್ತಪಡಿಸಿದೆ.
ಇದರ ಭಾಗವಾಗಿ ಭಾಸ್ಕರ್ ರೆಡ್ಡಿ ಅವರನ್ನು ಏಪ್ರಿಲ್ 16ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್ 18ರಂದು ಭಾಸ್ಕರ್ ರೆಡ್ಡಿ ಹಾಗೂ ಮತ್ತೋರ್ವ ಆರೋಪಿ ಉದಯಕುಮಾರ್ ರೆಡ್ಡಿ ಅವರನ್ನು ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮತ್ತೊಂದೆಡೆ, ಭಾಸ್ಕರ್ ರೆಡ್ಡಿ ಪುತ್ರರಾದ ಕಡಪ ಸಂಸದ ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್ 25ರವರೆಗೆ ಬಂಧಿಸುವಂತಿಲ್ಲ. ಆದರೆ, ಸಿಬಿಐ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. ಶನಿವಾರದಂದು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವೈಎಸ್ಆರ್ ಕಾಂಗ್ರೆಸ್ ಸಂಸದ ಅವಿನಾಶ್ ರೆಡ್ಡಿ ವಿರುದ್ಧ ಮೇ 31ರವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿತ್ತು. ಈಗ ಅವಿನಾಶ್ರೆಡ್ಡಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.